ಹೊಸಪೇಟೆ: ನನಗೆ ಮೊದಲು ಮಂತ್ರಿಸ್ಥಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಲಾಗುವುದು ಎಂದರು. ನನಗೆ ಅನುಮಾನವಿತ್ತು. ಆದರೆ, ಸರ್ಕಾರ ರಚನೆಯಾಗುವುದು ತಿಳಿದಿರಲಿಲ್ಲ. ತೆಗೆದುಕೊಂಡ ತೀರ್ಮಾನವನ್ನು ಹಿಂಪಡೆಯಲಿಲ್ಲ. ಉಪಚುನಾವಣೆಯಲ್ಲಿ ಸೋಲು- ಗೆಲುವಿನ ಬಗ್ಗೆ ನಿರ್ಧಾರ ಮಾಡಲಿಲ್ಲ. ಜೋ ಡರ್ ಗಯಾ ವೋ ಮರ್ ಗಯಾ ಎಂದು ಹಜ್ ಮತ್ತು ವಕ್ಫ್ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದು ಜನ ಸ್ನೇಹಿತರಿದ್ದೆವು. ಹೊಸಪೇಟೆಯಲ್ಲಿ ತಿರುಗಾಡುತ್ತಿದ್ದೆವು. 35 ವರ್ಷದವರೆಗೆ ನಾವು ದಂಡಪಿಂಡಗಳೇ. ಅದೃಷ್ಟ ಎಲ್ಲಿಗೆ ಕರೆದುಕೊಂಡು ಬರುತ್ತದೆ ಎಂಬುದು ಹೇಳುವುದಕ್ಕೆ ಬರುವುದಿಲ್ಲ. ನಾನೇನು ಸತ್ಯಹರಿಶ್ಚಂದ್ರನಲ್ಲ. ಅಲ್ಲದೇ, ನಾನು 24 ಕ್ಯಾರೆಟ್ ಚಿನ್ನವಲ್ಲ. ಆದರೆ, 18 ಕ್ಯಾರೆಟ್ ಗ್ಯಾರೆಂಟಿ ಎಂದು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿಕೊಂಡರು.
ಇದನ್ನೂ ಓದಿ: ಬಸ್ಗಾಗಿ ಕಾಲೇಜು ವಿದ್ಯಾರ್ಥಿಗಳ ಪರದಾಟ: ಪ್ರಾಣ ಪಣಕ್ಕಿಟ್ಟು ಪ್ರಯಾಣ!
ಈ ಹಿಂದೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಜಿಲ್ಲೆ ಸ್ವರೂಪ ಬದಲಾವಣೆ ಮಾಡಬೇಕಾಗಿದೆ. ಹಾಗಾಗಿ ನಾನು ಸಾರ್ವಜನಿಕ ಜೀವನದಲ್ಲಿ ಇರಬೇಕಾಗಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಅವಶ್ಯಕವಾಗಿದೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಖಂಡ ಬಳ್ಳಾರಿಯನ್ನು ಒಂದು ಮಾಡಲಾಗುವುದು ಎಂದು ರಾಜಕಾರಣಿಯೊಬ್ಬರು ಹೇಳುತ್ತಿದ್ದಾರೆ. ಅದು ಹೇಗೆ ಸಾಧ್ಯ ಎಂಬುದು ನನಗೆ ತಿಳಿದಿಲ್ಲ. ಈಗಲೂ ನಾವು ಬಳ್ಳಾರಿ ಜಿಲ್ಲೆಯಲ್ಲಿ ಸೇರಿದ್ದೇವೆ. ನೂತನ ಜಿಲ್ಲೆಯ ಕುರಿತು ನ್ಯಾಯಾಲಯಕ್ಕೆ ಹೋಗಬಹುದು. ಸ್ವಾರ್ಥಕ್ಕಾಗಿ ಹೇಳಿಕೆಗಳನ್ನು ನೀಡಬಾರದು. ವಿಜಯನಗರ ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ. ಹಗಲುಗನಸು ಕಾಣುತ್ತಿದ್ದಾರೆ ಅಷ್ಟೇ ಎಂದು ಆನಂದ್ ಸಿಂಗ್ ಎಂದು ಟೀಕಿಸಿದರು.