ಬಳ್ಳಾರಿ: ಜಿಲ್ಲಾ ಖನಿಜ ನಿಧಿಯನ್ನು ಕೋವಿಡ್-19 ನಿಯಂತ್ರಣಕ್ಕೆ ಬಳಸಿಕೊಳ್ಳುವ ವಿಚಾರ ಸಂಬಂಧ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಸಚಿವ ಆನಂದ್ ಸಿಂಗ್ ಜಿಲ್ಲಾಧಿಕಾರಿ ಸ್ಪಷ್ಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಅರಣ್ಯ ಸಚಿವ ಆನಂದ್ ಸಿಂಗ್ ಕೋವಿಡ್ನಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ನಿಯಮಾವಳಿಗಳನ್ನು ಬದಿಗೊತ್ತಿ ಕ್ರಮ ಕೈಗೊಳ್ಳಿ ಎಂದು ಡಿಸಿ ನಕುಲ್ ಅವರಿಗೆ ಸೂಚಿಸಿದರು. ಅಲ್ಲದೇ ಸರ್ಕಾರದಲ್ಲಿದ್ದುಕೊಂಡೇ ನಾವು ಅಸಹಾಯಕರಾಗಿದ್ದೇವೆ ಎಂದರು. ಹೀಗಾಗಿ ಬಳ್ಳಾರಿಯಲ್ಲಿ ಇರೋ ಕೋಟಿಗಟ್ಟಲೆ ಹಣವನ್ನು ಬಳಸಿ ಜಿಲ್ಲೆಯ ಜನರಿಗೆ ಪಡಿತರ ನೀಡಬೇಕು. ಪ್ರತಿ ತಾಲೂಕಿಗೂ 5 ಕೋಟಿ ಹಣ ಬಿಡುಗಡೆ ಮಾಡಿ ಜನರ ತೊಂದರೆ ನಿವಾರಣೆ ಮಾಡಬೇಕೆನ್ನುವುದು ಜನಪ್ರತಿನಿಧಿಗಳು ಒತ್ತಾಯಿಸಿದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಡಿಎಂಎಫ್ ಫಂಡ್ ( ಜಿಲ್ಲಾ ಖನಿಜ ನಿಧಿಯನ್ನು) ಮನಸ್ಸಿಗೆ ಬಂದ ಹಾಗೇ ಬಳಸಲು ಬರೋಲ್ಲ ಎಂದು ಸ್ಪಷ್ಟನೆ ನೀಡಿದ್ರು. ಡಿಎಂಎಫ್ ನಿಧಿ ಅಡಿ ಶೇ.10ರಷ್ಟು ಮಾತ್ರ ಅನುದಾನವನ್ನು ಕೋವಿಡ್-19 ಗಾಗಿ ಖರ್ಚು ಮಾಡಲು ಮಾತ್ರ ಸಾಧ್ಯವೆಂದು ಜಿಲ್ಲಾಧಿಕಾರಿ ನಕುಲ್ ಸಭೆಗೆ ತಿಳಿಸಿದ್ರು. ವೈದ್ಯಕೀಯ ಪರಿಕರಗಳು ಹಾಗೂ ಮಾಸ್ಕ್ ಖರೀದಿ ಮಾಡಲು ಮಾತ್ರ ಹಣ ಬಳಕೆಗೆ ಸಾಧ್ಯತೆ ಇದೆ ಎಂದ್ರು.
ಊಟ ಮಾಡಲು ಧವಸ ಧಾನ್ಯವಿಲ್ಲದೇ ಜನರು ಪರದಾಡ್ತಿದ್ದಾರೆ. ಈ ವೇಳೆ ಡಿಎಂಎಫ್ ಬಳಕೆ ಮಾಡಲು ಬರೋದಿಲ್ಲವೆಂದ್ರೆ ಹೇಗೆ ಎಂದು ಪ್ರಶ್ನಿಸಿದ ಸಚಿವ ಆನಂದ್ ಸಿಂಗ್ಗೆ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ನಾಗೇಂದ್ರ ಸೋಮಲಿಂಗಪ್ಪ, ತುಕಾರಾಂ ಕೂಡ ಸಾಥ್ ನೀಡಿ ಜಿಲ್ಲಾಧಿಕಾರಿ ನಕುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.
ನಂತರ ಹಣ ಬಳಕೆಗೆ ಕಾನೂನಿನ ತೊಡಕುಗಳು ಮತ್ತು ಪರಿಹಾರ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸುತ್ತೇನೆಂದು ಡಿಸಿಎಂ ಸವದಿ ಸಮಾಧಾನಪಡಿಸಿದ್ರು.