ಬಳ್ಳಾರಿ: ಬೆಳಗಾವಿ ಗಡಿ ವಿವಾದ ಕುರಿತು ಬೆಳಗಾವಿಗೊಂದು ನ್ಯಾಯ - ಬಳ್ಳಾರಿಗೊಂದು ನ್ಯಾಯನಾ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗಡಿ ವಿವಾದ ಕುರಿತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಬಳ್ಳಾರಿ ಗಡಿ ಒತ್ತುವರಿ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಏಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಗಡಿ ವಿಚಾರವಾಗಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಸಿಎಂ ಕೈಬಿಡಬೇಕು.
2008ರಲ್ಲಿ ಹಾಲಿ ಸಚಿವ ಬಿ.ಶ್ರೀರಾಮುಲು ಸಹಭಾಗಿತ್ವದ ಓಬಳಾಪುರಂ ಮೈನಿಂಗ್ ಕಂಪನಿಯು ಗಡಿ ಗ್ರಾಮ ಒತ್ತುವರಿ ಮಾಡಿದ್ದಲ್ಲದೇ ಗಡಿ ಗ್ರಾಮದ ಗುರುತು ನಾಶಪಡಿಸಿದ ಆರೋಪ ಎದುರಿಸುತ್ತಿದ್ದಾರೆ. ಅಂತವರನ್ನ ಇಂದಿನ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ್ದಲ್ಲದೇ ಅವರಿಗೆ ಡಿಸಿಎಂ ಪಟ್ಟ ಕಟ್ಟಲು ಹೊರಟಿದ್ದಾರೆ. ಗಡಿ ಗುರುತು ನಾಶಪಡಿಸಿದ ಪ್ರಮುಖ ಆರೋಪವನ್ನು ಸಚಿವ ಶ್ರೀರಾಮುಲು ಎದುರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕೊಡಬಾರದು ಎಂದು ಗಣೇಶ ಆಗ್ರಹಿಸಿದ್ದಾರೆ.