ಬಳ್ಳಾರಿ: ಲಾಕ್ಡೌನ್ ಎಫೆಕ್ಟ್ನಿಂದಾಗಿ ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ರೈತರು ಬೆಳೆದ ಮೆಕ್ಕೆಜೋಳಕ್ಕೆ ನಿರೀಕ್ಷಿತ ಪ್ರಮಾಣದ ಬೇಡಿಕೆ ಇಲ್ಲದ ಕಾರಣ, ರಾಜ್ಯ ಸರ್ಕಾರ ತಲಾ ಒಬ್ಬೊಬ್ಬ ರೈತರಿಗೆ ಅಂದಾಜು 5000 ರೂ.ಗಳ ಪರಿಹಾರ ಧನ ನೀಡಲು ನಿರ್ಧರಿಸಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ತಿಳಿಸಿದರು.
ಗಣಿ ಜಿಲ್ಲೆಯ ಪಶ್ಚಿಮ ತಾಲೂಕು ಸೇರಿದಂತೆ ಇತರೆಡೆ ಅಂದಾಜು 89 ಸಾವಿರ ಹೆಕ್ಟೆರ್ ಪ್ರದೇಶ ವ್ಯಾಪ್ತಿಯಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಸೂಕ್ತ ಪರಿಹಾರ ಧನ ನೀಡಲು ನಿರ್ಧರಿಸಲಾಗಿದೆ. ಕಳೆದ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯನ್ನ ಕೃಷಿ ಇಲಾಖೆಯು ಸರ್ವೆಕಾರ್ಯವನ್ನ ಮಾಡಿದೆ. ಈ ಸರ್ವೆಕಾರ್ಯದ ವರದಿಯನ್ನ ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, ಶೀಘ್ರವೇ ಮೆಕ್ಕೆಜೋಳ ಬೆಳೆದ ತಲಾ ಒಬ್ಬೊಬ್ಬ ರೈತರ ಬ್ಯಾಂಕ್ ಖಾತೆಗೆ ಕನಿಷ್ಠ 5,000 ರೂ.ಗಳ ಪರಿಹಾರ ಧನ ಜಮೆಯಾಗಲಿದೆ. ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಹೇಳಿದ್ದಾರೆ.
ಒಟ್ಟಾರೆಯಾಗಿ ಅಂದಾಜು 2,08,687 ರೈತರು ರಾಜ್ಯ ಸರ್ಕಾರದ ಪರಿಹಾರ ಧನದ ಫಲಾನುಭವಿಗಳಾಗಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು ಆರ್ಥಿಕ ಸಂಕಷ್ಟ ಎದುರಿಸಬಾರದೆಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದೆ. ರೈತರಿಗೆ ಪರಿಹಾರ ಧನ ನೀಡುವ ಮುಖೇನ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲಾಗುತ್ತಿದೆ.