ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿ ಮನೆಗಳಿಗೂ ಒಂದು ನಳ ಜೋಡಣೆ ಮತ್ತು 55 ಎಲ್.ಪಿ.ಸಿ.ಡಿ ನೀರು ಪೂರೈಕೆಗಾಗಿ ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮಗಳಲ್ಲಿ ಸಮಿತಿ ರಚಿಸಲಾಗುತ್ತಿದೆ. ಇದಕ್ಕಾಗಿ ಗ್ರಾಮ ಪಂಚಾಯತಿಯಿಂದ ಶೇ. 10ರಷ್ಟು ವಂತಿಗೆ ಪಡೆದು ದಿನದ 24 ಗಂಟೆಗಳ ಕಾಲ ನೀರು ಪೂರೈಸಲು ಕ್ರಮ ವಹಿಸಲಾಗುವುದು ಎಂದರು.
ಸುಸ್ಥಿರ ಜಲ ಮೂಲ ಹಾಗೂ ತಾಳುವಿಕೆ ಇರುವ ಜಲ ಮೂಲ ಒದಗಿಸುವುದು, ಮೊದಲ ಹಂತದಲ್ಲಿ 55 ಎಲ್.ಪಿ.ಸಿ.ಡಿ ನೀರು ಪೂರೈಕೆ ಇರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. 55 ಎಲ್.ಪಿ.ಸಿ.ಡಿಗಿಂತ ಕಡಿಮೆ ನೀರು ಪೂರೈಕೆ ಇರುವ ಯೋಜನೆ ಪುನಶ್ಚೇತಗೊಳಿಸಿ ಅಂತಹ ಗ್ರಾಮಗಳಿಗೆ ಹೆಚ್ಚುವರಿ ಸ್ಥಿರ ಜಲ ಮೂಲ ಪ್ರಸ್ತಾಪಿಸಿ ಅವುಗಳನ್ನು ಸಹ ಜೆಜೆಎಂ ಯೋಜನೆ ವ್ಯಾಪ್ತಿಗೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಜೆಜೆಎಂ ಯೋಜನೆಯನ್ನು ಕರ್ನಾಟಕದಲ್ಲಿ ‘ಮನೆ ಮನೆಗೆ ಗಂಗೆ’ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರು ಘೋಷಿಸಿದ್ದಾರೆ. ಈ ಯೋಜನೆಯಡಿ ಗ್ರಾಮ ಪಂಚಾಯತ್ನ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯ ಜವಾಬ್ದಾರಿ ಹೆಚ್ಚಿಗೆ ಇದ್ದು, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕಾಗಿದೆ.
ಜಿಲ್ಲೆಯ ಒಟ್ಟು 6 ತಾಲೂಕುಗಳಲ್ಲಿ ಒಟ್ಟು 198 ಗ್ರಾಮ ಪಂಚಾಯತಿಗಳಿದ್ದು, 662 ಗ್ರಾಮಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಒಟ್ಟು 320877 ಮನೆಗಳಿವೆ. ಕ್ರೀಯಾತ್ಮಕ ನಳಗಳನ್ನು ಹೊಂದಿರುವ ಮನೆಗಳು 13563 ಇದ್ದು, ಕ್ರಿಯಾತ್ಮಕ ನಳಗಳ ಜೋಡಣೆ ಮಾಡಬೇಕಾದ ಮನೆಗಳ ಸಂಖ್ಯೆ 307314 ಇರುತ್ತವೆ.