ಬಳ್ಳಾರಿ: ಬೃಹತ್ ಪ್ರಮಾಣದ ಕೋವಿಡ್ ಲಸಿಕೆ ನೀಡಿಕೆ ಆಂದೋಲನವನ್ನು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದು 1.50 ಲಕ್ಷ ಲಸಿಕೆ ನೀಡಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಮಾತನಾಡಿ, ಇಡೀ ರಾಜ್ಯದಲ್ಲಿ ಇದೇ ಸೆ.17ರಂದು ಬೃಹತ್ ಪ್ರಮಾಣದ ಕೋವಿಡ್ ಲಸಿಕೆ ನೀಡಿಕೆ ಆಂದೋಲನ ನಡೆಯುತ್ತಿದೆ. ಅಂದು ಜಿಲ್ಲೆಯಲ್ಲಿ 1.50 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ನಿಗದಿತ ಗುರಿ ಸಾಧಿಸುವ ನಿಟ್ಟಿನಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 550 ವ್ಯಾಕ್ಸಿನೇಶನ್ ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ತಂಡಗಳಲ್ಲಿ ವ್ಯಾಕ್ಸಿನೇಟರ್, ಡಾಟಾ ಎಂಟ್ರಿ ಅಪರೇಟರ್ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳು ಇರಲಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸೆ.17 ರಂದು ನಡೆಯುವ ಲಸಿಕಾ ಕಾರ್ಯಕ್ರಮದ ಮೇಲೆ ವಿಶೇಷ ಗಮನ ಹರಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ:
ಎಲ್ಲಾ ತಾಲೂಕುಗಳಲ್ಲಿ ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ತಾ.ಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‍ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬೃಹತ್ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನರು ಸಹ ಮುಂದೆ ಬಂದು ಲಸಿಕೆ ಪಡೆದುಕೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಡಿಸಿ ಮನವಿ ಮಾಡಿದರು.
8.50 ಲಕ್ಷ ಲಸಿಕೆ ಪಡೆಯುವುದು ಬಾಕಿ:
ಜ.16 ರಿಂದ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆರಂಭವಾಗಿದ್ದು, 18 ವರ್ಷ ಮೇಲ್ಪಟ್ಟ 21.50 ಲಕ್ಷ ಜನರಲ್ಲಿ ಇದುವರೆಗೆ ಜಿಲ್ಲೆಯಲ್ಲಿ 12.50 ಲಕ್ಷ ಜನರು (ಮೊದಲ ಡೋಸ್ ಮತ್ತು ಎರಡನೇ ಡೋಸ್) ಪಡೆದುಕೊಂಡಿದ್ದು, ಶೇ.59 ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ 8.50 ಲಕ್ಷ ಜನರು ಮೊದಲನೇ ಡೋಸ್ ಸಹ ಪಡೆದುಕೊಂಡಿಲ್ಲ. ಅವರಿಗೆ ಲಸಿಕೆ ನೀಡಲು ಈ ವಿಶೇಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೋವಿಡ್ 3ನೇ ಅಲೆ ಬಂದರೆ ನಮ್ಮ ಜಿಲ್ಲೆಗೆ ಅಪಾಯ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜನರು, ಗ್ರಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ತಾಪಂ ಮತ್ತು ಜಿಪಂ ಸದಸ್ಯರು, ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮುಂದೆ ಬಂದು ಈ ಲಸಿಕಾ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಲಸಿಕಾ ನೀಡಿಕೆ ಕಾರ್ಯ ಸೆ.17 ರಂದು ಬೆಳಗ್ಗೆ 6.30 ರಿಂದ ಸಂಜೆ 7ರ ವರೆಗೆ ನಡೆಯಲಿದ್ದು, ಲಸಿಕೆ ಪಡೆಯದವರು ಅಂದು ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು. ಈ ಮೂಲಕ 3ನೇ ಅಲೆ ತಡೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.