ಬಳ್ಳಾರಿ: ಕೆಎಸ್ಆರ್ಟಿಸಿ ಬಸ್ ರಸ್ತೆ ಬದಿ ಪಲ್ಟಿ ಹೊಡೆದು 40ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟೀನ್ ಕಂಬ ಹಾಗೂ ಉತ್ತರ ಮಲೈ ರಸ್ತೆಯಲ್ಲಿ ಇಂದು ಸಂಭವಿಸಿದೆ.
ಗಾಯಾಳುಗಳನ್ನು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಬಳ್ಳಾರಿಯ ವಿಮ್ಸ್ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಗಿರೆನಹಳ್ಳಿ ಉತ್ತರ ಮಲೈ ಭಾಗದಿಂದ ಸಂಡೂರಿಗೆ ಬರುತ್ತಿದ್ದ ಬಸ್ನಲ್ಲಿ ಶಾಲಾ, ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಂಡಕ್ಟರ್ ಕೈ ಮುರಿದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಪಲ್ಟಿ: ಕಂಡಕ್ಟರ್, ಪ್ರಯಾಣಿಕರಿಗೆ ಗಾಯ.. ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವೆ ಹೆಬ್ಬಾಳ್ಕರ್
ಇತ್ತೀಚಿನ ಅಪಘಾತ ಘಟನೆಗಳು: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ 9ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಶಿವಪುರದ ಬಳಿ ಸೆಪ್ಟೆಂಬರ್ 14ರಂದು ನಡೆದಿತ್ತು. ಬಳ್ಳಾರಿಯಿಂದ ಹಡ್ಲಗಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆ ಬದಿಯ ಗದ್ದೆಗೆ ಪಲ್ಟಿಯಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಜನರು ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದು, 9 ಜನ ಗಾಯಗೊಂಡಿದ್ದರು. ಗಾಯಾಳುಗಳನ್ನು ಮೋಕಾ ಆಸ್ಪತ್ರೆ ಹಾಗೂ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಮೋಕಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕಳೆದ ತಿಂಗಳು ಶಿವಮೊಗ್ಗದಲ್ಲಿ ಸಾರಿಗೆ ಬಸ್ ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದರು. ಸಾಗರಕ್ಕೆ ತೆರಳುತ್ತಿದ್ದ ಬಸ್ಗೆ ಬೈಕ್ ಅಡ್ಡ ಬಂದಿತ್ತು. ಅಪಘಾತ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದರು. ಸ್ಥಳೀಯರು ಹಾಗೂ ಇತರರು ಬಸ್ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದರು.