ಬಳ್ಳಾರಿ: ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕೋವಿಡ್ ನಿಯಂತ್ರಿಸಲು ಲಸಿಕೆಯೊಂದೇ ರಾಮಬಾಣ ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದರೂ ಸಹ ಕೆಲವರು ಈ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಂತೆಯೇ ಕೊರೊನಾ ಲಸಿಕೆಗೆ ಹೆದರಿ ಭೂಪನೊಬ್ಬ ಮರವೇರಿ ಕುಳಿತ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ಬುಧವಾರ ಡೆನದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೈಲೂರು ಗ್ರಾಮದ ಹುಲೆಪ್ಪ ಲಸಿಕೆ ಹಾಕಿಸಿಕೊಳ್ಳಲು ಭಯಪಟ್ಟು ಮರವೇರಿದ ವ್ಯಕ್ತಿ ಎಂಬುದು ತಿಳಿದುಬಂದಿದೆ. ಆಶಾ ಮತ್ತು ಆರೋಗ್ಯ ಸಹಾಯಕರು ಗ್ರಾಮದ ಮನೆಗಳಿಗೆ ತೆರಳಿ ಕೊರೊನಾ ಲಸಿಕೆ ಹಾಕಲು ಮುಂದಾಗಿದ್ದಾರೆ. ಸಿಬ್ಬಂದಿ ಮನೆಗೆ ಬರುವುದನ್ನು ಗಮನಿಸಿದ ಹುಲೆಪ್ಪ ಮನೆಯ ಕೂಗಳತೆ ದೂರದಲ್ಲಿರುವ ಮರದ ಮೇಲೇರಿ ಕುಳಿತಿದ್ದ. ವಿಷಯ ತಿಳಿದ ಗ್ರಾಮಲೆಕ್ಕಾಧಿಕಾರಿ ಮಂಜಪ್ಪ ಮತ್ತು ಗ್ರಾಮದ ಮುಖಂಡರು ಹುಲೆಪ್ಪನ ಮನವೊಲಿಸಿ ಮರದಿಂದ ಕೆಳಗಿಳಿಸಿ ಲಸಿಕೆ ಹಾಕಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹುಲೆಪ್ಪ, ಲಸಿಕೆ ಹಾಕಿಸಿಕೊಂಡರೆ ವಿಪರೀತ ಜ್ವರ, ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಕೆಲವರು ಸತ್ತಿದ್ದಾರೆ ಎನ್ನುವ ವದಂತಿಯನ್ನು ಕೆಲ ಮಾಧ್ಯಮಗಳಲ್ಲಿ ನೋಡಿದ್ದೆ. ಅದಕ್ಕೆ ನನಗೂ ಭಯವಿತ್ತು. ಏನು ಆಗುವುದಿಲ್ಲ ಅನ್ನೋದು ಲಸಿಕೆ ಹಾಕಿಸಿಕೊಂಡ ನಂತರ ತಿಳಿಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಓದಿ: NEPಯಿಂದ ಯಾವ ಆತಂಕವೂ ಇಲ್ಲ, ಶಿಕ್ಷಣ ಶುಲ್ಕವೂ ಹೆಚ್ಚಳ ಆಗಲ್ಲ: ಸಚಿವ ಅಶ್ವತ್ಥ್ ನಾರಾಯಣ್