ಬಳ್ಳಾರಿ: ಉತ್ತರ ಪ್ರದೇಶದಲ್ಲಿ ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಯುವ ಘರ್ಜನೆ ಸೇನೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಮನಿಷಾ ವಾಲ್ಮೀಕಿ ಎಂಬ 19 ವರ್ಷದ ಯುವತಿಯನ್ನು 4 ಜನ ಸೇರಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿ ನಾಲಿಗೆ ಕೊಯ್ದು, ಬೆನ್ನು ಮೂಳೆ ಮುರಿದು, ಕುತ್ತಿಗೆಯನ್ನು ಸೀಳಿ, ಕ್ರೂರವಾಗಿ ಕೊಲೆ ಮಾಡಿದ್ದಾರೆ. ಅತ್ಯಾಚಾರಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇದರಿಂದ ಭವಿಷ್ಯದಲ್ಲಿ ಇತರರು ಪಾಠ ಕಲಿಯಬೇಕು ಮತ್ತು ಸಮಾಜದಲ್ಲಿ ಇಂತಹ ಘಟನೆಗಳು ಪುನರಾವರ್ತಿಸುವುದು ನಿಲ್ಲಿಸಬೇಕು. ಆ ಮೂಲಕ ದಲಿತ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಸಂಘಟನೆ ಕೋರಿದೆ.
ಈ ಸಮಯದಲ್ಲಿ ಸಂಘಟನೆಯ ಅಧ್ಯಕ್ಷ ಎನ್. ಸತ್ಯನಾರಾಯಣ, ವಿ.ಎಸ್. ಶಿವಶಂಕರ್, ಜನಾರ್ಧನ ನಾಯಕ, ಎನ್. ನಾಗರಾಜ, ವೆಂಕಟೇಶ್, ಬಿ. ರುದ್ರಪ್ಪ ಮೊದಲಾದವರು ಇದ್ದರು.