ಬಳ್ಳಾರಿ: ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲು ಕಾನೂನಾತ್ಮಕ ತೊಡಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರಕ್ಕಿಂದು ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಸಚಿವ ಸ್ಥಾನ ನೀಡಲು ಕಾನೂನಿನ ತೊಡಕಿದೆ. ಸೋತವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡ್ವೋ ಅನ್ನೋ ಬಗ್ಗೆ ಸ್ಪಷ್ಟತೆ ಇಲ್ಲ. ನ್ಯಾಯಾಲಯದ ಆದೇಶದಲ್ಲಿ ಸೋತವರಿಗೆ ಮಂತ್ರಿ ಸ್ಥಾನ ನೀಡೋ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸಚಿವ ಸಂಪುಟದಿಂದ ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಆರ್.ಶಂಕರ್ ಅವರಿಗೆ ಅನ್ಯಾಯವಾಗಲ್ಲ. ವಿಶ್ವನಾಥ್ ಹಿರಿಯರು, ಪರಿಸ್ಥಿತಿ ಅರ್ಥ ಮಾಡಿ ಕೊಳ್ಳಬೇಕು ಎಂದರು.
ಹಾಗೇ ಸವದಿ ಕೂಡ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಉಪ ಚುನಾವಣೆಯಿಂದ ಹಿಂದೆ ಸರಿದ್ರು. ಬೆಳಗಾವಿ ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಇರೋದೊಂದೇ ಸ್ಥಾನ ಯಾರಿಗೆ ಕೊಡಬೇಕು? ಅನಿವಾರ್ಯವಾಗಿ ಸವದಿಗೆ ನೀಡಲಾಗಿದೆ. ಮುಂದೆ ಶಂಕರ್ ಅವರಿಗೂ ಒಳ್ಳೆಯದಾಗ್ತದೆ ಎಂದು ವಿಶ್ವನಾಥ್ ಅವರಿಗೆ ಪರೋಕ್ಷವಾಗಿ ಉದಾಹರಣೆ ಸಹಿತ ವಿವರಿಸಿದರು.