ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತಮವಾಗಿ ಇಳುವರಿ ಬಂದ್ರೂ ಸಹ ರೈತರಿಗೆ ಹಾಕಿದ ಬಂಡವಾಳ ಬರುತ್ತಿಲ್ಲ. ಪರಿಣಾಮ, ರೈತರು ತಾವು ಬೆಳೆದ ಬೆಳೆ ನೋಡಿ ರೈತ ಕಣ್ಣೀರು ಹಾಕುವಂತಾಗಿದೆ.
ದರ ಇಳಿಕೆಯ ಬಿಸಿ:
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತೂರಿನ ರೈತ ಅಳವುಂಡಿ ನಿಂಗಪ್ಪ 3.45 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದರು. ಈ ಬಾರಿ ಉತ್ತಮ ಫಸಲು ಕೂಡಾ ಬಂದಿದೆ. ಲಾಕ್‌ಡೌನ್ ಮುನ್ನ ಒಂದು ಕೆ.ಜಿ. ಪಪ್ಪಾಯಗೆ 14 ರೂ. ರವರೆಗೆ ಮಾರಾಟ ಮಾಡಿದ್ದಾರೆ. ಈಗ ಒಂದು ಕೆ.ಜಿ.ಗೆ 5 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, 9 ರೂ. ವ್ಯತ್ಯಾಸವಾಗಿದೆ. ಇದನ್ನು ರೈತನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ಮುಂಚೆ 40 ಟನ್‌ನಷ್ಟು ಪಪ್ಪಾಯ ಮಾರಾಟ ಮಾಡಿದ್ದು, 5 ಲಕ್ಷ ರೂ. ಆದಾಯ ಬಂದಿತ್ತು ಎಂದು ಅವರು ಹೇಳುತ್ತಾರೆ.
ಆದಾಯಕ್ಕೆ ಕುತ್ತು:
ಇವರ ಹೊಲದಲ್ಲಿ ಹತ್ತು ಜನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಪ್ಪಾಯ ಹಣ್ಣು ಕೀಳಲು ದಿನಕ್ಕೆ 300 ರೂ. ನೀಡಬೇಕು. ಪಪ್ಪಾಯ ದರ ಒಂದು ಕೆ.ಜಿಗೆ 5 ರೂಪಾಯಿ ಇದೆ. ಒಟ್ಟಾರೆ 3 ಲಕ್ಷ ರೂ.ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳುತ್ತಾರೆ.
ಮಾರಾಟ ಮಾಡುವ ಅನಿವಾರ್ಯತೆ:
ಈಗಾಗಲೇ ಪಪ್ಪಾಯ ಇಳುವರಿ ಬಂದಿದೆ. ಈಗ ಮಾರಾಟ ಮಾಡದಿದ್ದರೆ ಕೊಳೆತೇ ಹೋಗಬಹುದು. ಇದರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಿದೆ. ರೈತ ಸಿಗುವ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ.
ಕಳೆದ ಎರಡು ವರ್ಷದಿಂದ ನಷ್ಟ:
ಕಳೆದ ಎರಡು ವರ್ಷಗಳಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸಲು ಸರಕಾರ ಯೋಜನೆಯನ್ನು ಸಿದ್ಧಪಡಿಸಬೇಕು. ಇಲ್ಲದಿದ್ದರೆ ರೈತರು ನಷ್ಟದ ಸುಳಿಗೆ ಸಿಲುಕುತ್ತಾರೆ ಎಂದು ರೈತ ತನ್ನ ಅಳಲು ಹೇಳಿಕೊಂಡರು.