ಹೊಸಪೇಟೆ : ನಗರದ ಆಕಾಶವಾಣಿಯು ಸತತ 28 ವರ್ಷಗಳಿಂದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಮಹತ್ವದ ಕಾರ್ಯ ಮಾಡುವುದರ ಮೂಲಕ ಹೆಚ್ಚಿನ ಪ್ರಾಶಸ್ತ್ಯ ಗಳಿಸಿಕೊಂಡಿದೆ. ಕೊರೊನಾ ಸಂದರ್ಭದಲ್ಲಿಯೂ ಜಾಗೃತಿಯಿಂದ ತನ್ನ ಕಾರ್ಯ ನಿರ್ವಹಿಸುತ್ತಿದೆ.
ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತನ್ನದೇ ಶೋತೃಗಳನ್ನು ಆಕಾಶವಾಣಿ ಹೊಂದಿದೆ. ಹೊಸಪೇಟೆಯಲ್ಲಿ 1992 ಮೇ 1ರಂದು 100.5 ತರಂಗಾಂತಗಳಿಂದ ಆಕಾಶವಾಣಿ ಪ್ರಾರಂಭ ಮಾಡಲಾಯಿತು. ಹೊಸಪೇಟೆಯ 60 ಕಿಮೀ ವ್ಯಾಪ್ತಿಯಲ್ಲಿ ಆಕಾಶವಾಣಿ ಕಾರ್ಯ ನಿರ್ವಹಿಸುತ್ತಿದೆ. ಇದು ಸ್ಥಳೀಯ ಬಾನುಲಿ(ರೇಡಿಯೋ) ಕೇಂದ್ರವಾಗಿದೆ. 5 ಎಕೆರೆಯ ಜಾಗದಲ್ಲಿ ತನ್ನ ವಿಸ್ತಾರವನ್ನು ಹೊಂದಿದ್ದು, ರಾಜ್ಯದಲ್ಲಿ ವಿಜಯಪುರ, ರಾಯಚೂರು, ಕಾರವಾರ, ಚಿತ್ರದುರ್ಗ ಸೇರಿ ಬಳ್ಳಾರಿಯ ಸ್ಥಳೀಯ ಬಾನುಲಿ ಕೇಂದ್ರಗಳನ್ನು ಕಾಣಬಹುದು.
ಡಿಜಿಟಲೀಕರಣ ಸ್ಪರ್ಶ : ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಈ ಮೊದಲು ಗಾಲಿ ಟೇಪ್ಗಳನ್ನು ಬಳಸಲಾಗುತ್ತಿತ್ತು. ಆದರೆ, ಸಂಪೂರ್ಣ ಕಂಪ್ಯೂಟರೀಕರಣಗೊಳಿಸಲಾಗಿದೆ. ಇದರಿಂದ ಕಾರ್ಯ ಕ್ಷಮತೆ ಕಡಿಮೆಯಾಗಿದೆ. ಅಲ್ಲದೇ, ಕೇಂದ್ರ ಸರ್ಕಾರ ಆ್ಯಪ್ ಬಿಡುಗಡೆ ಮಾಡಿದ್ದು, ಅಂತರ್ಜಾಲ ಸಹಾಯದಿಂದಲೂ ಕೇಳಬಹುದಾಗಿದೆ.
ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ : ಆಕಾಶವಾಣಿಯಲ್ಲಿ ಸ್ಥಳೀಯ ಪ್ರತಿಭೆಗಳು ಕೆಲಸ ನಿರ್ವಹಿಸುತ್ತಿವೆ. ಮಕ್ಕಳು, ಮಹಿಳೆಯರ ಮತ್ತು ಯುವವಾಣಿ ಕಾರ್ಯಕ್ರಮಗಳ ಜತೆಗೆ ಕೃಷಿ ಬಗ್ಗೆ ಕಿಸಾನ್ ವಾಣಿ ಗ್ರಾಮಾಂತರಂಗ ಹಾಗೂ ವಿಜ್ಞಾನಿ, ಪ್ರಗತಿಪರ ರೈತರ ಅಭಿಪ್ರಾಯಗಳ ಮೂಲಕ ಕಾರ್ಯಕ್ರಮ ಮಾಡಲಾಗುತ್ತಿದೆ. ವಾರದ ಅತಿಥಿ, ಮಾತುಕತೆ, ಪ್ರತಿ ಭಾನುವಾರ ಹಾಡಿನ ಬಂಡಿ ಕಾರ್ಯಕ್ರಮಗಳು ಉತ್ತಮ ಮೆಚ್ಚುಗೆ ಗಳಿಸಿವೆ.
ಆಕಾಶವಾಣಿ ವ್ಯಾಪ್ತಿ ಹಿರಿದು : ಆಕಾಶವಾಣಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆ ರೇಡಿಯೋಗಳಲ್ಲಿ 100.5 ತರಂಗಾಂತರದಲ್ಲಿ ಬರುತ್ತದೆ. ಒಂದು ಲಕ್ಷಕ್ಕಿಂತ ಹೆಚ್ಚು ಕೇಳುಗರನ್ನು ಆಕಾಶವಾಣಿ ಹೊಂದಿದೆ. ಆ್ಯಪ್ನ ಮೂಲಕ ಬೆಂಗಳೂರು, ಹಾವೇರಿ ಸೇರಿ ನಾನಾ ಕಡೆ ಆಕಾಶವಾಣಿ ಪ್ರಿಯರಿದ್ದಾರೆ.
ಹುದ್ದೆಗಳು ಖಾಲಿ : ಆಕಾಶವಾಣಿಯಲ್ಲಿ 32 ಮಂಜೂರು ಹುದ್ದೆಗಳಿವೆ. ಆದರೆ, ಈಗ 13 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 19 ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡುವ ಮೂಲಕ ಸರ್ಕಾರ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.
ಸ್ವರೂಪ : ಆಕಾಶವಾಣಿಯಲ್ಲಿ ಮೂರು ವಿಭಾಗಗಳನ್ನು ಕಾಣಬಹುದು. ಆಡಳಿತ ವಿಭಾಗ, ಕಾರ್ಯಕ್ರಮ ವಿಭಾಗ, ತಾಂತ್ರಿಕ ವಿಭಾಗಗಳಿವೆ. ಆಡಳಿತ ವಿಭಾಗವು ಎಲ್ಲಾ ಉದ್ಯೋಗಿ ಕೆಲಸ ಹಾಗೂ ಸಂಬಳ ನೋಡಿಕೊಂಡು ಹೋಗುತ್ತದೆ. ಕಾರ್ಯಕ್ರಮ ವಿಭಾಗವು ರೇಡಿಯೋ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ವಿಶೇಷ ಅಂದ್ರೇ ಮುಂದಿನ 6 ತಿಂಗಳ ಕಾರ್ಯಕ್ರಮ ಪಟ್ಟಿಯನ್ನು ಮೊದಲೇ ಸಿದ್ಧಗೊಳಿಸಲಾಗುತ್ತದೆ. ತಾಂತ್ರಿಕ ವಿಭಾಗದಲ್ಲಿ ಸ್ಟುಡಿಯೋ ಹಾಗೂ ಟ್ರಾನ್ಸ್‌ಮೀಟರ್ ನೋಡಿಕೊಳ್ಳಲಾಗುತ್ತದೆ.
ಕೊರೊನಾ ಸಂದರ್ಭದ ಕಾರ್ಯಕ್ರಮಗಳು : ಕೊರೊನಾ ಸೋಂಕು ಹಿನ್ನೆಲೆ ಮಾರ್ಚ್ ತಿಂಗಳಿನಿಂದ ಜುಲೈವರೆಗೆ ವಿವಿಧ ಭಾರತಿಯ ಕಾರ್ಯಕ್ರಮ ಪ್ರಸ್ತುತ ಪಡಿಸಲಾಗಿತ್ತು. ನಂತರ ಅನುಮತಿಯೊಂದಿಗೆ ಕೊರೊನಾ ನಿಯಮಗಳ ಅನುಸಾರ ಆಕಾಶವಾಣಿ ನಡೆಸಲಾಗುತ್ತಿದೆ.
ಅಲ್ಲದೇ ಜನರಲ್ಲಿ ನಿರಂತರ ಸಾಮಾಜಿಕ ಅಂತರ, ಕೈಗಳನ್ನು ತೊಳೆಯುವುದು, ಮಾಸ್ಕ್ ಧರಿಸುವುದರ ಕುರಿತು ಜಾಗೃತಿ ಮೂಡಿಸಲಾಗಿದೆ. ಆಕಾಶವಾಣಿ ಸ್ಥಳೀಯ ಪ್ರತಿಭೆ ಗುರುತಿಸುವ ಕಾರ್ಯ ಮಾಡುತ್ತಿದೆ. ಅಲ್ಲದೇ, ಕ್ರಮ ಬದ್ಧವಾಗಿ ಕಾರ್ಯ ನಿರ್ವವಹಿಸಲಾಗುತ್ತಿದೆ. ವೈಭವೀಕರಣಕ್ಕೆ ಹಾಗೂ ಕಿರಿಕಿರಿಗೆ ಆಕಾಶವಾಣಿಯಲ್ಲಿ ಆದ್ಯತೆ ಇಲ್ಲ ಎಂದು ಆಕಾಶವಾಣಿಯ ಮುಖ್ಯಸ್ಥ ನಾಗೇಂದ್ರ ಹೇಳಿದರು.