ಹೊಸಪೇಟೆ: ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವು ಸುವರ್ಣ ಅಕ್ಷರದಲ್ಲಿ ಬರೆದಿಟ್ಟುಕೊಳ್ಳುವ ಸೌಭಾಗ್ಯ ನಮಗೆಲ್ಲರಿಗೂ ತಂದುಕೊಟ್ಟಿದೆ. ಇದನ್ನು ಯಾರೂ ಕಳೆದುಕೊಳ್ಳುವುದು ಬೇಡ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ವರ್ಷಗಳಿಂದ ಕಾಯಲಾಗಿತ್ತು. ಈಗ ಆ ಶುಭ ಗಳಿಗೆ ಬಂದಿದೆ, ಎಲ್ಲರ ಅಳಿಲು ಸೇವೆ ಇರಲಿ. ಇದು ಇತಿಹಾಸದ ಪುಟದಲ್ಲಿ ಸೇರಲಿದೆ. ಈ ಹಿಂದೆ ಸೊಮೇಶ್ವರ ದೇವಸ್ಥಾನ ನಿರ್ಮಾಣದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಪಾತ್ರ ಹಿರಿದಾಗಿತ್ತು. ಅವರನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತೇವೆ ಎಂದರು.
ಚಂದಾ ಎತ್ತುತ್ತಿದ್ದೇವೆ ಎಂಬ ಭಾವನೆ ಇರಬಾರದು. ಹಿಂದೂ ಧರ್ಮದ ಇತಿಹಾಸವನ್ನು ಹಂಚುವ ರೀತಿಯಲ್ಲಿ ಇರಬೇಕು. ಪ್ರತಿಯೊಂದು ಮನೆಯಿಂದ ನಿಧಿ ಸಂಗ್ರಹ ಮಾಡಲಿ. ಬಡವನಿಂದ ಎಲ್ಲರ ಮನೆಯಿಂದ ಹಣ ಸಂಗ್ರಹವಾಗಲಿ. ಮಂದಿರ ನಿರ್ಮಾಣದಲ್ಲಿ ನನ್ನದು ಕೊಡುಗೆ ಇದೆ ಎಂದು ಆತ್ಮತೃಪ್ತಿ ಮೂಡಲಿ ಎಂದು ಹೇಳಿದರು.
ಇದಕ್ಕೂ ಮುನ್ನ ಸಚಿವ ಆನಂದ್ ಸಿಂಗ್ ಗೋ ಪೂಜೆಯನ್ನು ಮಾಡಿದರು. ಬಳಿಕ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯ ಪೂಜೆ ನೆರವೇರಿಸಿದರು. ನಂತರ ವಡಕರಾಯ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.