ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಬಗ್ಗೆ ತಾಂತ್ರಿಕ ಸಮೀಕ್ಷೆ ಕಾರ್ಯ ನಡೆಯಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್, ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಕುರಿತು ನಿರ್ದಿಷ್ಟವಾದ ಮಾಹಿತಿ ವರದಿಯಾಗಿಲ್ಲ. ಹಾಗಾಗಿ, ಜಲಾಶಯದಲ್ಲಿ ತುಂಬಿರುವ ಹೂಳಿನ ಕುರಿತು ಸಮೀಕ್ಷೆಗೆ ರಾಜ್ಯ ಸರ್ಕಾರ ನಿವೃತ್ತ ಎಂಜಿನಿಯರ್ ಒಳಗೊಂಡ ತಾಂತ್ರಿಕ ತಂಡವನ್ನು ರಚನೆ ಮಾಡಿ, ಕೂಡಲೇ ಸಮೀಕ್ಷೆ ಕಾರ್ಯವನ್ನು ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲದೇ, ಹೂಳಿನ ನೆಪವೊಡ್ಡಿ ಈ ಜಲಾಶಯದ ನೀರನ್ನು ಕದಿಯುವ ನೀರುಗಳ್ಳರನ್ನು ಪತ್ತೆ ಹಚ್ಚಬೇಕು. ನೀರುಗಳ್ಳರು ಯಾರೆಂಬುದನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ ಚಂದ್ರಶೇಖರ್, ಈ ನೀರನ್ನು ಯಾರು ಬಳಕೆ ಮಾಡುತ್ತಿದ್ದಾರೋ ಅವರೇ ನೀರುಗಳ್ಳರೆಂದು ಗೊಂದಲಮಯ ಹೇಳಿಕೆ ನೀಡಿದ್ದಾರೆ.
ಇನ್ನು ಎಸ್ಎಪಿ ಕಾಯ್ದೆ ಕುರಿತು ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದ ಎಫ್ಆರ್ಪಿ ಮಾದರಿಯಲ್ಲೇ ರಾಜ್ಯದಲ್ಲಿ ಎಸ್ಎಪಿ ಕಾಯ್ದೆ ಜಾರಿಗೊಳಿಸಿತ್ತು. ಮಾಜಿ ಸಿಎಂ ಸದಾನಂದಗೌಡರು ಈ ಕಾಯ್ದೆ ಜಾರಿಗೆ ಅಸ್ತು ನೀಡಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆ ಕಾಯ್ದೆ ಜಾರಿಗೊಳಿಸಿದ್ದರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಈ ಕಾಯ್ದೆ ನಿಷ್ಕ್ರಿಯಗೊಳಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡ ಬಳಿಕ ಎಸ್ಎಪಿ ಕಾಯ್ದೆಗೆ ಪೋಸ್ಟ್ ಮಾಟಮ್ ಮಾಡುವ ಮುಖೇನ ಮರಣ ಶಾಸನವಾಗಿ ಬದಲಾವಣೆಗೊಂಡಿತೆಂದು ಕೋಡಿಹಳ್ಳಿ ದೂರಿದ್ದಾರೆ.
ಸದ್ಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಎಸ್ಎಪಿ ಕಾಯ್ದೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಕೇವಲ ಕಬ್ಬಿನ ಬೆಳೆಗೆ ಮಾತ್ರ ಎಸ್ಎಪಿ ಕಾಯ್ದೆ ಅನ್ವಯ ದರ ನಿಗದಿಪಡಿಸಲಾಗುತ್ತಿದೆ. ರಾಜ್ಯದಲ್ಲಿ ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ಈ ಎಸ್ಎಪಿ ಕಾಯ್ದೆ ಅನ್ವಯವಾಗುವುದರ ಜೊತೆಗೆ ಅಗತ್ಯ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕೆಂದರು.