ಬಳ್ಳಾರಿ : ಇಲ್ಲಿನ ಸಂಜಯ ಗಾಂಧಿನಗರದ ದಯಾ ಕೇಂದ್ರದ ಹಿಂಭಾಗದ ಗುಡ್ಡದಲ್ಲಿ ಚಿರತೆಯೊಂದು ಕಳೆದೆರಡು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ನಾಗರಿಕರು ಆತಂಕಗೊಂಡಿದ್ದಾರೆ. ಗುಡ್ಡದಲ್ಲಿ ಚಿರತೆ ಮಲಗಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ನಗರ ಡಿವೈಎಸ್ಪಿ ಶೇಖರಪ್ಪ ನೇತೃತ್ವದಲ್ಲಿ ಸಿಪಿಐಗಳಾದ ವಾಸುಕುಮಾರ್, ಷಣ್ಮುಖಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ನಾಗರಿಕರು ರಾತ್ರಿ ವೇಳೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಹಳೇ ದರೋಜಿ, ಮೆಟ್ರಿ, ದೇವಲಾಪುರ ಭಾಗಗಳಲ್ಲಿ ಈಗಾಗಲೇ ಚಿರತೆ ದಾಳಿ ನಡೆಸಿ ಮೇಕೆ, ಕುರಿ ಸೇರಿದಂತೆ ಜನರ ಪ್ರಾಣ ಹಾನಿಯಾಗಿರುವ ಘಟನೆಯೂ ನಡೆದಿದೆ. ನಗರದಲ್ಲಿ ಚಿರತೆ ಪ್ರತ್ಯೇಕ್ಷವಾಗಿರುವ ಹಿನ್ನೆಲೆ ಚಿರತೆ ಪತ್ತೆಯಾದ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಸಂದೀಪ್ ಸೂರ್ಯವಂಶಿ ತಿಳಿಸಿದ್ದಾರೆ.
ಓದಿ : ಕೆಲಸ ಸಿಗದ ಹಿನ್ನೆಲೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ