ಬಳ್ಳಾರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಇಲ್ಲಿನ ಕೋರ್ಟ್ ಆವರಣದಲ್ಲಿ ಇಂದು ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ದೊರೆಯಿತು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಪರ್ಯಾಯ ವ್ಯಾಜ್ಯಗಳ ಬಳಿ 2ನೇ ಅಪರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ ಆರ್ ರಾಜಾ ಸೋಮಶೇಖರ್ ಸಾಕ್ಷರತಾ ರಥಕ್ಕೆ ಹಸಿರು ನಿಶಾನೆ ನೀಡಿದರು.
ಕಾನೂನು ಸಾಕ್ಷರತಾ ಕಾರ್ಯಕ್ರಮವು ಇಂದಿನಿಂದ ಮೂರು ದಿನಗಳ ಕಾಲ ಒಟ್ಟು ಹನ್ನೆರಡು ವಿವಿಧ ಗ್ರಾಮ ಪಂಚಾಯತ್‌ಗಳಿಗೆ ತೆರಳಿ ಕಾಯ್ದೆ ಅನ್ವಯ ಕಾನೂನುಗಳ ಕುರಿತು ಜಾಗೃತಿ ಮೂಡಿಸಲಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮತ್ತು ಕಾನೂನಿನ ಸೇವೆ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಉದ್ದೇಶ ಈ ರಥ ಹೊಂದಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರು ಮಾತನಾಡಿ, ಸಾರ್ವಜನಿಕರಲ್ಲಿ ಕಾನೂನಿನ ಅರಿವು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಥಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದರು. ಭೂ ಸುಧಾರಣೆ, ಮಕ್ಕಳ ಕಳ್ಳ ಸಾಕಾಣಿಕೆ, ಮಾನವ, ಮಹಿಳಾ ಮತ್ತು ಮಕ್ಕಳ ಹಕ್ಕುಗಳು, ವಿಮೆ, ಪೋಕ್ಸೋ ಕಾಯ್ದೆ ಹಾಗೂ ಇನ್ನಿತರೆ ಕಾಯ್ದೆ ಪ್ರಕಾರ ಆಯ್ಕೆ ಮಾಡಲಾದ ಗ್ರಾಮಗಳಿಗೆ ತೆರಳಿ ಅಧಿಕಾರಿಗಳಿಂದ ಜಾಗೃತಿ ಮೂಡಿಸಲಾಗುವುದೆಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್ ಎಂ ಅಂಕಲಯ್ಯನವ್ರು ಮಾತನಾಡಿ, ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನಿನ ಜಾಗೃತಿ ಮೂಡಿಸಲಾಗುವುದೆಂದರು. ವಕೀಲರ ಸಂಘದ ಸದಸ್ಯೆ ಪುಷ್ಪಲತಾ, ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಖಾಸೀಂ ಚೂರಿಖಾನ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ವಿಫುಲ ಎಂ.ಪೂಜಾರಿ, 4ನೇ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎನ್ ವಿ ಭವಾನಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ ಕೆ ರಾಮಲಿಂಗಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎಸ್ ವಿ ಅರಸೂರ ಭಾಗವಹಿಸಿದ್ದರು.