ಬಳ್ಳಾರಿ: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಟೆನ್ಶನ್ ಶುರುವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಧಮ್ ಬಗ್ಗೆ ಕೇಳುತ್ತಿದ್ದಾರೆ. ನಿಮ್ ಧಮ್ ಕಡಿಮೆಯಾಗುತ್ತಿದೆ. ನಮ್ ಧಮ್ ಏರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ನಗರದ ಗುರು ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯ ಬಹಿರಂಗ ಸಭೆಯ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಮರಸ್ಯ ಕಾಪಾಡಲು ಜೋಡೋ ಯಾತ್ರೆ ನಡೆಯುತ್ತಿದೆ. ಐದು ವಿಚಾರ ಇಟ್ಟುಕೊಂಡು ಐಕ್ಯತಾ ಯಾತ್ರೆ ನಡೆಯುತ್ತಿದೆ. ಬಿಜೆಪಿ ಭಾಷೆ ಮತ್ತು ಜಾತಿಯ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಶಾಂತಿ, ಉದ್ಯೋಗಕ್ಕೆ, ಬೆಲೆ ಏರಿಕೆ ವಿರುದ್ದ ಐಕ್ಯತಾ ಯಾತ್ರೆ, ಸಮಾನತೆಗೆ, ರಾಜ್ಯದ ಭ್ರಷ್ಟಾಚಾರ ವಿರುದ್ಧ ಯಾತ್ರೆ ಉದ್ದೇಶ ಎಂದರು. ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಿಂದ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯೆಂಬ ಬಿರುದು ಬಂದಿದೆ. ನಿಮ್ಮ ಭ್ರಷ್ಟಾಚಾರದ ಬಗ್ಗೆ ನಾನು ಹೇಳುತ್ತಿಲ್ಲ. ಬಿಜೆಪಿ ಶಾಸಕರೇ ಹೇಳ್ತಾರೆ ಎಂದು ಡಿಕೆಶಿ ಹರಿಹಾಯ್ದರು.
ಐದು ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಐಕ್ಯತೆ ಯಾತ್ರೆ ಆರಂಭಿಸಿದೆ. ಕರ್ನಾಟಕದ ಶಾಂತಿಯ ತೋಟಕ್ಕೆ ಬೆಜೆಪಿಯಿಂದ ಕಳಂಕ ಎದುರಾಗಿದೆ. ದೇಶಾದ್ಯಂತ ಶಾಂತಿಯ ತೋಟ ನಿರ್ಮಾಣ ಮಾಡುವುದು ಯಾತ್ರೆಯ ಧ್ಯೇಯ, ಉದ್ದೇಶ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರಿಂದ ಸಾಗಿ ಬರುತ್ತಿರುವ ಭಾರತ್ ಜೋಡೋ ಯಾತ್ರೆಯ ಬಹಿರಂಗ ಸಭೆ ಮುಂದಿನ ತಿಂಗಳು ಬಳ್ಳಾರಿಯಲ್ಲಿ ನಡೆಯಲಿದ್ದು, ಅದು ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವಂತೆ ನಡೆಯಬೇಕು. ಅದು ಇಡೀ ದೇಶ ಬಳ್ಳಾರಿ ಕಡೆಗೆ ತಿರುಗಿ ನೋಡುವಂತೆ ಆಗಬೇಕು ಎಂದು ಡಿ. ಕೆ ಶಿವಕುಮಾರ್ ಕರೆ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರದಿಂದ 25 ಸಾವಿರ ಜನರನ್ನು ಸೇರಿಸಬೇಕು. ಸಿದ್ದರಾಮಯ್ಯ ಹುಟ್ಟುಹಬ್ಬ ಹಾಗೂ ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ನಡಿಗೆಗಿಂತ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಡಿಕೆಶಿ ಹೇಳಿದರು.
ಓದಿ: ಭಾರತ್ ಜೋಡೋ ಯಾತ್ರೆ.. ಬಳ್ಳಾರಿಯಲ್ಲಿ ಡಿಕೆಶಿಗೆ ಅಭಿಮಾನಿಗಳಿಂದ ಸೇಬಿನ ಹಾರ