ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕವಿರಾಜ ಅರಸ್ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದರ ಬೆನ್ನಲ್ಲೇ ಅನರ್ಹ ಶಾಸಕ ಆನಂದಸಿಂಗ್, ವಿಜಯನಗರ ಉಪ ಚುನಾವಣೆಯ ಉಸ್ತುವಾರಿ ಜವಾಬ್ದಾರಿ ಹೊತ್ತ ಎನ್.ರವಿಕುಮಾರ, ಬಳ್ಳಾರಿ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಅವರು ಬಿಜೆಪಿ ಬಂಡಾಯ ಅಭ್ಯರ್ಥಿ ಕವಿ ರಾಜ ಅರಸ್ ಅವರ ಮನೆಗೆ ಭೇಟಿ ನೀಡಿ, ಬಿಜೆಪಿಯಲ್ಲಿ ಎದ್ದ ಬಂಡಾಯ ಶಮನಕ್ಕೆ ಯತ್ನಿಸಿ ವಿಫಲರಾದ್ರು.
ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕವಿರಾಜ ಅರಸ್ ಅವರು, ಆನಂದಣ್ಣ ಆನೆ ಇದ್ದಂತೆ. ನಾನು ಸಣ್ಣ ಇರುವೆ ಇದ್ದಂತೆ. ಇರುವೆ ಬಾಯಲ್ಲೋದ್ರೇ ಆನೆ ಬದುಕುತ್ತಾ. ಹಾಗಾಗಿ, ಆನಂದಣ್ಣ ನನಗೆ ಹೇಗಾದ್ರೂ ಮಾಡಿ ಟಿಕೆಟ್ ಕೊಡ್ಸಿ. ನೀನು ನನ್ನ ಬೆನ್ನಿಗೆ ನಿಂತು ಕೆಲ್ಸ ಮಾಡು. ಇಲ್ಲ ಎಂದರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಪಕ್ಕದಲ್ಲೇ ಇದ್ದ ಆನಂದಸಿಂಗ್ ಅವರ ಕಾಲಿಗೆರಗಲು ಮುಂದಾದ್ರು ಅರಸ್. ನಿನ್ನೆಯ ದಿನ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆನಂದ ಸಿಂಗ್ಗೆ ಟಿಕೆಟ್ ನೀಡಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.
ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದ ಅರಸ್ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಘೋಷಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ಸ್ಪರ್ಧಿಸಿದ್ದ ನನ್ನನ್ನು ಸೋಲಿಸಲು ಇದೇ ಆನಂದಸಿಂಗ್ ಅವರು ಪ್ರಯತ್ನಿಸಿದ್ದರು. ಹೀಗಾಗಿ, ಈ ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದ್ರು.