ಬಳ್ಳಾರಿ: ಅತಿಥಿ ಶಿಕ್ಷಕರಿಗೆ, ಉಪನ್ಯಾಸಕರಿಗೆ 6 ತಿಂಗಳ ಕಾಲ ಉದ್ಯೋಗವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಆದ್ದರಿಂದ ಆರ್ಥಿಕ ಪ್ಯಾಕೇಜ್ ಅಥವಾ ಗೌರವಧನ ಘೋಷಣೆ ಮಾಡಬೇಕು ಎಂದು ಕರ್ನಾಟಕ ಪದವೀಧರ ವೇದಿಕೆ ರಾಜ್ಯಾಧ್ಯಕ್ಷ ಕೆ.ಕೆ.ಹಾಳ್ ಗೋವರ್ಧನ ಮನವಿ ಮಾಡಿಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪತ್ರಿಕಾ ಭವನದಲ್ಲಿ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು, ಖಾಸಗಿ ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಅತಿಥಿ ಶಿಕ್ಷಕ ಮಲ್ಲಪ್ಪ ಮಾತನಾಡಿ, ಅವರು ಕಳೆದ 8 ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ್ದೆವೆ. ಲಾಕ್ಡೌನ್ ಸಮಯದಲ್ಲಿ ಅತಿಥಿ ಶಿಕ್ಷಕರಿಗೆ, ಉಪನ್ಯಾಸಕರಿಗೆ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ರಾಜ್ಯದಲ್ಲಿ 24 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಮಾರ್ಚ್ 16 ರಿಂದ ಶಾಲೆಗಳು ತೆರೆದಿಲ್ಲ. ಮೂರು ನಾಲ್ಕು ಜಿಲ್ಲೆಗಳಲ್ಲಿ ವೇತನ ಸರಿಯಾಗಿ ಬಂದಿಲ್ಲ. ಆರು ತಿಂಗಳಿಂದ ಯಾವುದೇ ವೇತನವಿಲ್ಲ ಹಾಗಾಗಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು. ಶಾಲೆ ಪ್ರಾರಂಭವಾದ ನಂತರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಅತಿಥಿ ಶಿಕ್ಷಕರಿಗೆ, ಉಪನ್ಯಾಸಕರಿಗೆ ಸೇವಾ ಭದ್ರತೆ, ಕೃಪಾಂಕ ನೀಡುವುದು, ಗೌರವ ಶಿಕ್ಷಕರ ಪದ ಬಳಕೆ, ಪಿಎಫ್ ಸೌಲಭ್ಯ, ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಸಿದರು.