ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ಪಟ್ಟಣ ಹೊರ ವಲಯದ ಸಾರ್ವಜನಿಕ ಸಂಚಾರ ರಸ್ತೆಯಲ್ಲಿ ಹಾಕಲಾಗಿದ್ದ ಒಕ್ಕಣೆಯನ್ನ ಹರಪನಹಳ್ಳಿ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಶಿವಪ್ಪನವರ ತೆರವುಗೊಳಿಸಿದರು.
ನ್ಯಾಯಾಧೀಶೆ ಮಂಜುಳಾ ಅವರು ಕಾರಿನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಅದೇ ರಸ್ತೆಗೆ ಅಡ್ಡಲಾಗಿ ತೊಗರಿ ಬೆಳೆಗಳನ್ನ ಹಾಕಿ ಒಕ್ಕಣೆ ಮಾಡುತ್ತಿದ್ದುದನ್ನು ಗಮನಿಸಿದ್ದಾರೆ. ಕೂಡಲೆ ಕಾರು ನಿಲ್ಲಿಸಿ ರೈತರನ್ನು ಕರೆದು, ಊಟ ಮಾಡುವ ಪದಾರ್ಥವನ್ನು ರಸ್ತೆಗೆ ಹಾಕಬೇಡಿ. ಅವು ವಾಹನದ ಟೈರ್ ಹಾಗೂ ಡಾಂಬರ್ ರಸ್ತೆಗೆ ಸಿಲುಕಿ ಹಾಳಾಗುತ್ತವೆ. ಅಲ್ಲದೇ, ಅಪಘಾತ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅರಿವು ಮೂಡಿಸಿದರು.
ಇದಕ್ಕೆ ಸಮ್ಮತಿಸಿದ ರೈತರು, ತೊಗರಿ ಗಿಡಗಳನ್ನು ರಸ್ತೆಯಿಂದ ಎರಡು ಮೀಟರ್ ಅಂತರದಲ್ಲಿ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂಬಂಧ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಮಾತನಾಡಿ, ರೈತರು ತಾವು ಬೆಳೆದ ಬೆಳೆಯನ್ನು ರಸ್ತೆಯಲ್ಲಿ ಒಕ್ಕಣೆ ಹಾಕುವುದನ್ನು ನಿಲ್ಲಿಸುವವರೆಗೂ ಬಿಡುವುದಿಲ್ಲ. ಬುಧವಾರದಿಂದ ವಿವಿಧ ಇಲಾಖೆ ಅಧಿಕಾರಿಗಳ ಸಮೇತ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳಲ್ಲಿ ಸಂಚರಿಸುತ್ತೇನೆ ಎಂದು ತಿಳಿಸಿದರು.
ಅಲ್ಲಿಂದ ನೇರವಾಗಿ ಹಲುವಾಗಲು ಪೊಲೀಸ್ ಠಾಣೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಇವರೊಂದಿಗೆ ಎಸ್‍ಐ ಪ್ರಶಾಂತ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.