ಬಳ್ಳಾರಿ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಜಿಲ್ಲೆಯ ಕೈಗಾರಿಕೆಗಳ ಸದ್ಯದ ಸ್ಥಿತಿಗತಿಗಳ ಕುರಿತು ಮನವಿ ಪತ್ರ ಬರೆದಿದೆ. ಈ ಪತ್ರವನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೂ ಸಹ ಕಳುಹಿಸಲಾಗಿದೆ.
ಮನವಿ ಪತ್ರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ. ರವಿಕುಮಾರ ಅವರು ಜೆಎಸ್ಡಬ್ಲ್ಯೂ ಸಂಸ್ಥೆಗೆ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಜೆಎಸ್ಡಬ್ಲ್ಯೂ(ಜಿಂದಾಲ್) ಕೇವಲ ತನ್ನ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಹರಿಸದೆ ತನ್ನ ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯವಾಗಿ ಕಾಯ್ದುಕೊಂಡಿದೆ. ನೆರೆಹೊರೆಯ ಗ್ರಾಮಗಳನ್ನು ದತ್ತು ತೆಗೆದುಕೊಂಡು ಗ್ರಾಮಗಳ ಅಭವೃದ್ಧಿ, ಶಾಲಾ ಕಾಲೇಜುಗಳ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ, ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಜಿಲ್ಲೆಯ ನಾಗರೀಕರ ಆರೋಗ್ಯಕ್ಕಾಗಿ ಸಂಜೀವಿನಿ ಆಸ್ಪತ್ರೆಯು ತನ್ನ ಸೇವೆಯನ್ನು ಒದಗಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜೆಎಸ್ಡಬ್ಲ್ಯು ಸಂಸ್ಥೆಯನ್ನು ಕೋವಿಡ್-19 ರ ಕಾರಣದಿಂದಾಗಿ ಸ್ಥಗಿತಗೊಳಿಸಬೇಕು ಎಂದು ಇತ್ತೀಚೆಗೆ ಕೇಳಿ ಬರುತ್ತಿರುವ ಕೂಗು ತುಂಬಾ ಶೋಚನೀಯವಾಗಿದೆ. ಸಮಾಜಮುಖಿ ಕೆಲಸ, ಆಳುವ ಸರ್ಕಾರಗಳಿಗೆ ಆರ್ಥಿಕ ಶಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಹೀಗೆ ಹತ್ತು ಹಲವು ಸೇವೆಯಿಂದ ಗುರುತಿಕೊಂಡಿರುವ ಈ ಬೃಹತ್ ಕೈಗಾರಿಕೆಯನ್ನು ಸ್ಥಗಿತಗೊಳಿಸಿದರೆ ಇದರಿಂದಾಗಿ ಈ ಮೇಲ್ಕಾಣಿಸಿದ ಎಲ್ಲ ಜವಾಬ್ದಾರಿಯುತ ಕೆಲಸಗಳನ್ನು ಮಾಡುವವರು ಯಾರು ಎಂದು ರವಿಕುಮಾರ ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಜೆಎಸ್ಡಬ್ಲ್ಯೂ ಕಾರ್ಖಾನೆಯು ಕೊರೆಕ್ಸ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಒಂದು ಬಾರಿ ಫರ್ನೇಸ್ ಬಂದ್ ಮಾಡಿದರೆ ಪುನಃ ಪ್ರಾರಂಭಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಜೆಎಸ್ಡಬ್ಲ್ಯೂ ಕಾರ್ಖಾನೆಯನ್ನು ಬಂದ್ ಮಾಡುವುದರ ಬದಲಾಗಿ ಹೆಚ್ಚಿನ ಸುರಕ್ಷತಾ ಕ್ರಮದೊಂದಿಗೆ ಕಾರ್ಯನಿರ್ವಹಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.