ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಸೀಲ್ಡೌನ್ ಮಾಡಿದರೆ ಕೊರೊನಾ ಸೋಂಕು ಈ ದೇಶ ಅಥವಾ ರಾಜ್ಯ ಬಿಟ್ಟು ಹೊಗುತ್ತಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು.
ಬಳ್ಳಾರಿಯ ಜಿಲ್ಲಾ ಕೋವಿಡ್ -19 ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ನಿಂದಲೇ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರೋದರಿಂದ ಜಿಲ್ಲೆಯ ಸಂಡೂರು ಮತ್ತು ತೋರಣಗಲ್ಲು ಭಾಗದಲ್ಲಿ ನೆಲೆಸಿರುವವರು ಹೆದರಿ ಬೇರೆಡೆಗೆ ವಲಸೆ ಹೋಗಲು ಚಿಂತನೆ ನಡೆಸಿದ್ದಾರೆ. ಹೀಗಾಗಿ, ಜಿಂದಾಲ್ ಸೀಲ್ಡೌನ್ ಮಾಡಬೇಕು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವ ಆನಂದ್ ಸಿಂಗ್ ಹೀಗೆ ಪ್ರತಿಕ್ರಿಯಿಸಿದರು.
ಬಳ್ಳಾರಿಯಲ್ಲಿ ವೈದ್ಯರಿಗೆ ಈ ಸೋಂಕು ಹರಡಿರುವ ಕಾರಣ ಸಿಬ್ಬಂದಿಗೆ ತೊಂದರೆಯಾಗಿದೆ. ಕೋವಿಡ್ ಆಸ್ಪತ್ರೆಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕೊರೊನಾ ಸೋಂಕಿನ ಕುರಿತು ಎಲ್ಲರಲ್ಲೂ ಅತಂಕ ಇದೆ. ಮೇಲಿಂದ ಮೇಲೆ ಸಾವುಗಳು ಸಂಭವಿಸಿದಾಗ ಈ ರೀತಿ ಭಯವಾಗೋದು ಸಹಜ.
ಕೋವಿಡ್ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದೆ. ಸರಿ ಮಾಡಿಸೋ ಪ್ರಯತ್ನ ಮಾಡ್ತಿದ್ದೇವೆ. ಜಿಂದಾಲ್ನಿಂದ ಸೋಂಕು ಹರಡಿಲ್ಲ ಎಂದು ಹೇಳೋಕೆ ಆಗಲ್ಲ. ಇಡೀ ರಾಜ್ಯಕ್ಕೆ ಗೊತ್ತು. ಅವರಿಂದಲೇ ಹೆಚ್ಚು ರೋಗ ಹರಡಿದೆ ಅನ್ನೋದು. ಕೆಲವು ಗುಂಪುಗಳು ಜಿಂದಾಲ್ ಕಂಪನಿಯನ್ನು ಟಾರ್ಗೆಟ್ ಮಾಡುತ್ತಿವೆ. ಅದಕ್ಕೆ ಏನು ಮಾಡೋಕೆ ಆಗಲ್ಲ. ಈ ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಸೀಲ್ಡೌನ್ ಮಾಡುವುದಾದರೆ, ಕೊರೊನಾ ರಾಜ್ಯ ಮತ್ತು ದೇಶ ಬಿಟ್ಟು ಹೋಗುತ್ತಾ? ಎಂದು ಅವರು ಕೇಳಿದರು.