ಬಳ್ಳಾರಿ: ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಜನರಿಗೆ ಸಹಾಯ ಮಾಡಲು ಯುವಕರ ತಂಡವೊಂದು ಮುಂದಾಗಿದೆ. ನಗರದಲ್ಲಿನ ಬಡವರು, ನಿರ್ಗತಿಕರು, ಕಾರ್ಮಿಕರು ಹಾಗು ಹಮಾಲಿಗಳ ಹಸಿವು ನೀಗಿಸುವ ನಿಟ್ಟಿನಲ್ಲಿ ಒಂದು ರೂಪಾಯಿಗೆ ಊಟ ವಿತರಿಸಲು ಜೈನ್ ಯುವಕರ ತಂಡ(ಮಂಡಳಿ) ಮುಂದಾಗಿದೆ.
ವರ್ಷದ 365 ದಿನಗಳ ಕಾಲವೂ ವಾಹನದ ಮೂಲಕ ಯುವಕರ ತಂಡ ನಗರದ ವಿವಿಧ ಭಾಗಗಳಲ್ಲಿನ ಬಡ, ನಿರ್ಗತಿಕರಿಗೆ, ಕಾರ್ಮಿಕರಿಗೆ ಆಹಾರ ನೀಡಲು ನಿರ್ಧರಿಸಿದೆ. ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ತೆರಳುವ ವಾಹನ ಸರ್ಕಾರಿ ಆಸ್ಪತ್ರೆಗಳ ಮುಂಭಾಗ, ಎಪಿಎಂಸಿ, ಬಸ್‌ನಿಲ್ದಾಣ, ಫುಟ್ಪಾತ್ ಮೇಲಿರುವ ನಿರ್ಗತಿಕರಿಗೆ ಆಹಾರ ವಿತರಣೆ ಮಾಡುತ್ತಿದೆ.
ಪ್ರತಿನಿತ್ಯ 200ಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ಜೈನ್ ಯುವಕ ತಂಡ ಮಾರಾಟ ಮಾಡುತ್ತಿದೆ. ಜೋಳದ ರೊಟ್ಟಿ, ವಿವಿಧ ಪಲ್ಯ, ಬಿಸಿಬಿಸಿ ಅನ್ನ, ಸಾಂಬರು ಜೊತೆಗೆ ವಾರದಲ್ಲಿ ಒಂದು ಬಾರಿ ಸಿಹಿ ವಿತರಣೆ ನಡೆಯುತ್ತಿದೆ. ಜೈನ್ ಸಮುದಾಯದ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕೇವಲ ಫೋಟೋ ಫ್ರೆಂಡ್ಸ್: ಶ್ರೀರಾಮುಲು ವ್ಯಂಗ್ಯ