ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ವಿನೂತನ ರೀತಿಯಲ್ಲಿ ಬೋಧನೆ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.
ಹೌದು, ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ರಾಘವೇಂದ್ರ ಅವರು ಗ್ರಾಮದ ಪ್ರತಿ ವಿದ್ಯಾರ್ಥಿಯ ಮನೆಗೆ ತೆರಳಿ ಪಾಠ ಹೇಳಿಕೊಡುವ ಮೂಲಕ ಮಾದರಿಯಾಗಿದ್ದಾರೆ.
ಕಳೆದ ಐದು ತಿಂಗಳಿಂದ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ಮಕ್ಕಳ ಶೈಕ್ಷಣಿಕ ಬದುಕು ಕುಂಠಿತಗೊಳ್ಳುವ ಆತಂಕ ಪೋಷಕರನ್ನು ಕಾಡುತ್ತಿದೆ. ಕರ್ಚಿಗನೂರು ಸರ್ಕಾರಿ ಶಾಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮುಖ್ಯ ಶಿಕ್ಷಕ ರಾಘವೇಂದ್ರ ನೇತೃತ್ವದಲ್ಲಿ ಶಿಕ್ಷಕರು ಹಳ್ಳಿಗೆ ತೆರಳಿ ನಾಲ್ಕೈದು ಮಕ್ಕಳನ್ನು ಒಂದೆಡೆ ಸೇರಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ಬೋಧನೆ ಮಾಡುತ್ತಿದ್ದಾರೆ. ಪಾಠ ಹೇಳಿಕೊಡುವ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಿಕ್ಷಕನ ಈ ಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಕೊರೊನಾ ಜಾಗೃತಿ ಮೂಡಿಸುತ್ತಿದ್ದು, ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯಬಾರದು ಎಂದು ಸ್ವ ಇಚ್ಚೆಯಿಂದ ವಿದ್ಯಾರ್ಥಿಗಳ ಮನೆಗೆ ತೆರಳಿ ಬೋಧನೆ ಮಾಡುತ್ತಿರುವುದಾಗಿ ಪ್ರಭಾರಿ ಮುಖ್ಯ ಶಿಕ್ಷಕ ರಾಘವೇಂದ್ರ ತಿಳಿಸಿದ್ದಾರೆ.