ಬಳ್ಳಾರಿ: ಲಾಕ್ಡೌನ್ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವರ ಮೇಲೆ ಅಬಕಾರಿ ಅಧಿಕಾರಿಗಳು ಹೂವಿನ ಹಡಗಲಿ ತಾಲೂಕಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮದ್ಯ, ವಾಹನ ಸೇರಿದಂತೆ ಒಟ್ಟು 7,32,475 ರೂಪಾಯಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೂವಿನ ಹಡಗಲಿ ತಾಲೂಕಿನ ಹ್ಯಾರಡ ಗ್ರಾಮದ ಸಿ. ಕೆ. ಹೆಚ್. ಮಹೇಶ್ವರಪ್ಪ ಅವರಿಗೆ ಸೇರಿದ ಶಾಂತಿ ಬಾರ್ & ರೆಸ್ಟೋರೆಂಟ್ನಲ್ಲಿ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಅಕ್ರಮವಾಗಿ ವಿವಿಧ ಬ್ರಾಂಡ್ಗಳ ಮದ್ಯವನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳನ್ನು ನೋಡಿದ ಬಾರ್ನ ಕೆಲಸಗಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
775 ಲೀ. ಲಿಕ್ಕರ್ ಹಾಗೂ 367.78 ಲೀಟರ್ ಬಿಯರ್, ಕ್ಯಾಶ್ ಕೌಂಟರ್ನಲ್ಲಿಯ ರೂ.17,618 ಹಣ ಮತ್ತು ಕೃತ್ಯಕ್ಕೆ ಬಳಸಿದ ವಾಹನ ಸೇರಿ ಒಟ್ಟು ರೂ. 7,32,475 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಾರ್ ನೌಕರ ಆರೋಪಿ ಪ್ರಭಾಕರ್ ಲಕ್ಕಪ್ಪನವರ, ವಾಹನದ ಮಾಲೀಕ ಸೇರಿ ಮೂವರ ವಿರುದ್ಧ ಪ್ರ. ಸಂ. 45/2019-20 ಅನ್ನು ದಾಖಲಿಸಿ ಕೋರ್ಟ್ಗೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದಾರೆ.
ಈ ಸಮಯದಲ್ಲಿ ಅಬಕಾರಿ ಉಪ-ನಿರೀಕ್ಷಕಿಯರಾದ ನೇತ್ರಾ ಉಪ್ಪಾರ್, ರೇಣುಕಮ್ಮ, ಸಿಬ್ಬಂದಿ ನಿಂಗಪ್ಪ, ಮಂಜುನಾಥ್, ಸಾಬುಗೌಡ ಕರ್ತವ್ಯ ನಿರ್ವಹಿಸಿದರು.