ಬಳ್ಳಾರಿ: ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಸಾಮರಸ್ಯದಿಂದ ಜೀವನ ಸಾಗಿಸಿದರೆ ಸಮಾಜದಲ್ಲಿ ಯಾವುದೇ ಆತಂಕ ಇರುವುದಿಲ್ಲ. ಧರ್ಮ ಗ್ರಂಥಗಳು ಮಾನವ ಕುಲಕ್ಕೆ ಸಂಬಂಧಿಸುತ್ತವೆ ಎಂದು ಕ್ರೈಸ್ತ ಪಾದ್ರಿ ರೆವರೆಮಂಡ್ ಐವಾನ್ ಪಿಂಟೊ ಹೇಳಿದ್ದಾರೆ.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಿನ್ನೆ ಸಂಜೆ 7 ಗಂಟೆಗೆ ಪ್ರವಾದಿ ಮುಹಮ್ಮದ್ ಎಲ್ಲರಿಗಾಗಿ ಸಾರ್ವಜನಿಕ ಸಮಾವೇಶ ಜಮಾತೆ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ನಡೆಯಿತು.
ಧರ್ಮದ ಚೌಕಟ್ಟಿನಲ್ಲಿರುವ ನಾವೆಲ್ಲರೂ ಧರ್ಮದ ಬೇಲಿಯನ್ನು ವಿಸ್ತರಿಸಿ, ಸಾಮರಸ್ಯದಿಂದ ಜೀವನ ನಡೆಸಬೇಕಿದೆ ಎಂದು ಸಂಡೂರಿನ ಪ್ರಭುದೇವರ ವಿರಕ್ತ ಮಠದ ಪ್ರಭುಸ್ವಾಮಿ ಪ್ರತಿಪಾದಿಸಿದರು.ಧರ್ಮದ ಬೇಲಿಯನ್ನು ವಿಸ್ತರಿಸಲು ಕುರಾನ್, ಬೈಬಲ್, ವಚನ ಸಾಹಿತ್ಯವನ್ನು ಎಲ್ಲರೂ ಓದಬೇಕು. ಮತ್ತು ಪೈಗಂಬರ್ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ಮನುಷ್ಯರಲ್ಲಿ ಕ್ರೌರ್ಯ ಮತ್ತು ಹಣದ ಹಪಾಹಪಿಯನ್ನು ಕಾಣುತ್ತಿದ್ದೇವೆ. ಪೈಗಂಬರ್ ಅವರಿಗೆ ಅರಬ್ ರಾಷ್ಟ್ರಗಳು ತಲೆಬಾಗಿದ್ದವು. ಅಂತಹವರನ್ನು ಸ್ಮರಣೆ ಮಾಡುವುದು ಅನಿವಾರ್ಯ. ಅವರ ಸರಳತೆಯನ್ನು ಪ್ರಸ್ತುತ ಕಾಲದ ಮನುಷ್ಯರು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಮಹಮ್ಮದ್ ಕುಂಞ ಮಾತನಾಡಿ, ಪ್ರವಾದಿ ಮಹಮ್ಮದ್ ಅವರ ಬದುಕು ಸಮಾಜವನ್ನು ತಿದ್ದಿ, ಸುಧಾರಣೆ ಮಾಡಲು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಎಷ್ಟೇ ಹಣವಿದ್ದರೂ ಕೆಡುಕಿಲ್ಲದ ಸಚ್ಚಾರಿತ್ರೆಯ ಪ್ರಾಮಾಣಿಕ ಮನುಷ್ಯನನ್ನು ನಿರ್ಮಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಬದುಕಲು ಅಗತ್ಯವಿರುವ ಯಾವುದೂ ಇಲ್ಲ. ಅಗತ್ಯವಿಲ್ಲದ ಎಲ್ಲವೂ ಇದೆ. ಇಂತಹ ಸಮಾಜವನ್ನು ತಿದ್ದಲು, ಮನುಷ್ಯನ ಸುಧಾರಣೆಗೆ ಪ್ರವಾದಿಗಳ, ದಾರ್ಶನಿಕರ , ಸಾಧು ಸಂತರ ಸಂದೇಶ, ಮಾರ್ಗದರ್ಶನದಿಂದ ಮಾತ್ರ ಸಾಧ್ಯ ಎಂದರು.