ಬಳ್ಳಾರಿ: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪನವರು ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಸದ್ಯ ಪರಿಸ್ಥಿತಿ ಸರಿಯಾಗಿಲ್ಲ. ಆ ಕಾರಣಕ್ಕಾಗಿ ನಾನು ಸುಮ್ಮನೆ ಕೂತಿರುವೆ. 2018ನೇಯ ಇಸವಿಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಜನಾದೇಶ ಸಿಕ್ಕಿದ್ದರೆ ನನಗೂ ಕೂಡ ಸಚಿವ ಸ್ಥಾನ ಸಿಗುತ್ತಿತ್ತು. ನಮ್ಮ ಪಕ್ಷಕ್ಕೆ ಕಡಿಮೆ ಬಹುಮತ ಬಂದಿದ್ದರಿಂದಲೇ ಸಚಿವ ಸ್ಥಾನದ ಕೂಗೆತ್ತಲು ನಾನು ಮುಂದಾಗಲಿಲ್ಲ. ಮೂರನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮುನ್ಸೂಚನೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಅವಾಗಾದ್ರೂ ನನಗೆ ಸಚಿವ ಸ್ಥಾನ ಲಭಿಸಲಿದೆಯೇನೋ ಎಂಬ ನಿರೀಕ್ಷೆಯಲ್ಲಿ ನಾನಿರುವೆ ಎಂದರು.
ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಮಧ್ಯೆ ಪೈಪೋಟಿ ಇರಬಹುದು. ಆದರೀಗ ಈ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ. ವಿಜಯನಗರ ಜಿಲ್ಲೆ ರಚನೆ ವಿಚಾರವಾಗಿ ಸಿಎಂ ಈ ಹಿಂದೆ ನಮ್ಮ ಅಭಿಪ್ರಾಯ ಕೇಳಿದ್ದರು. ಬಳ್ಳಾರಿ ಎನ್ನುವ ಹೆಸರಿನ ಬದಲು ವಿಜಯನಗರ ಜಿಲ್ಲೆ ಎಂದಾಗುವುದೇ ಒಳ್ಳೆಯದು. ಜಿಲ್ಲೆ ವಿಭಜನೆ ಮಾಡುವುದು ಬೇಡ ಎಂದಿರುವೆ ಎಂದರು.