ಹೊಸಪೇಟೆ: ಸಾಕಷ್ಟು ಸಂಖ್ಯೆಯ ಬಸ್ಗಳು ಇಲ್ಲದ್ದರಿಂದ ಬಳ್ಳಾರಿಯಿಂದ ಕಂಪ್ಲಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬಳ್ಳಾರಿಯಿಂದ ಕಂಪ್ಲಿ ಹೋಗುವ ಬಸ್ನಲ್ಲಿ ವಿದ್ಯಾರ್ಥಿಗಳು ಜೋತು ಬಿದ್ದು ಪ್ರಯಾಣಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಕಂಪ್ಲಿ, ದೇವಲಾಪುರ, ಮೆಟ್ರಿ ಮಾರ್ಗವಾಗಿ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬಳ್ಳಾರಿಗೆ ಬರುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಬಸ್ಗಳು ಇರದೆ, ಬಸ್ನಲ್ಲಿ ಕುರಿಹಿಂಡಿನಂತೆ ತುಂಬಿಕೊಂಡು ಹೋಗುವುದರಿಂದ ವಿದ್ಯಾರ್ಥಿಗಳಿಗೆ ಜೀವಕ್ಕೆ ಕುತ್ತು ಬರುವಂತಹ ಸನ್ನಿವೇಶ ಎದುರಾಗಿದೆ.
ಹೆಚ್ಚುವರಿ ಬಸ್ ಓಡಿಸಲು ಮನವಿ:
ಹೆಚ್ಚುವರಿ ಬಸ್ ಓಡಿಸಲು ಹಲವು ಬಾರಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಆದರೆ, ಈವರೆಗೆ ಅಧಿಕಾರಿಗಳು ಸಮರ್ಪಕ ಸಾರಿಗೆ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಲಾಗಿದೆ.
ಈಟಿವಿ ಭಾರತದೊಂದಿಗೆ ಹೊಸಪೇಟೆ ಎನ್.ಈ.ಕೆ.ಎಸ್.ಆರ್.ಟಿ.ಸಿ ವಿಭಾಗದ ನಿಯಂತ್ರಣಾಧಿಕಾರಿ ಶೀನಯ್ಯ ಅವರು ಮಾತನಾಡಿ, ಕಂಪ್ಲಿಗೆ ಬಳ್ಳಾರಿಯಿಂದ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ. ಈ ವಿಷಯ ಬಳ್ಳಾರಿ ಘಟಕಕ್ಕೆ ಸಂಬಂಧಿಸಿದ್ದು. ಅಲ್ಲಿನ ಅಧಿಕಾರಿಗಳಿಗೆ ಬಸ್ ಸಮಸ್ಯೆಯ ಕುರಿತು ಗಮನಕ್ಕೆ ತರಲಾಗುವುದು ಎಂದರು.