ಹೊಸಪೇಟೆ (ವಿಜಯನಗರ): ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಶ್ರಮ ದೊಡ್ಡದು. ಇದನ್ನು ಯಾರೂ ಮರೆಯಬಾರದು. ಅವರೊಬ್ಬರು ಸಮರ್ಥ ನಾಯಕರಾಗಿದ್ದು, ಕರ್ನಾಟಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದು ಬದಾಮಿಯ ಶಿವಯೋಗ ಮಂದಿರದ ಹಾಗೂ ಹಾಲಕೇರಿ ಸಂಸ್ಥಾನ ಮಠದ ಅಧ್ಯಕ್ಷ ಡಾ. ಸಂಗನಬಸವ ಸ್ವಾಮೀಜಿ ಹೇಳಿದರು.
ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಯಕತ್ವದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಅವಕಾಶವನ್ನು ನೀಡಬಾರದಿತ್ತು. ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದರೆ, ಅವರು ಜವಾಬ್ದಾರಿಯನ್ನು ಸಮರ್ಥವಾಗಿ ಕೆಲಸ ನಿಭಾಯಿಸುತ್ತಿದ್ದರು. ಯಡಿಯೂರಪ್ಪ ಅವರ ಬಗ್ಗೆ ಹೈಕಮಾಂಡ್ಗೆ ತಪ್ಪು ತಿಳುವಳಿಕೆ ಇದೆ. ಇದರಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದರು.
ರಾಜ್ಯ ಪ್ರಗತಿ ಹೊಂದಬೇಕಾದರೆ ರಾಜಕೀಯ ಸ್ಥಿರತೆ ಇರಬೇಕು. ಹಾಗಾದಾಗ ಸಮಸ್ಯೆಗಳನ್ನು ಎದುರಿಸಲು ಸಮರ್ಥರಾಗುತ್ತಾರೆ. ಹೈಕಮಾಂಡ್ನಿಂದ ನಾಯಕತ್ವದ ಕುರಿತು ಚರ್ಚೆಯಾಗುತ್ತಿದೆ. ಸ್ಪಷ್ಟವಾದ ನಿಲುವನ್ನು ತಾಳಿದ್ದರೆ, ಇಂತಹ ಗಂಭೀರ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಭಿಪ್ರಾಯಟ್ಟರು.
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದು ನಮ್ಮ ಮನಸ್ಸಿಗೆ ನೋವು ತರಿಸಿದೆ. ಹಾಗಾಗಿ ಹೈಕಮಾಂಡ್ ತನ್ನ ಧೋರಣೆಯನ್ನು ಬದಲಾವಣೆ ಮಾಡಬೇಕು. ನಾಯಕತ್ವ ಬದಲಾವಣೆ ಮಾಡಿದರೆ ಬಿಜೆಪಿ ಉಳಿಯಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ, ಪಕ್ಷಕ್ಕೆ ಉಳಿಗಾಲವಿಲ್ಲ. ಅಸಮರ್ಥರಾಗಿದ್ದರೆ ನಾಯಕತ್ವ ಬದಲಾವಣೆ ಮಾಡಿದರೆ ಸರಿ. ಸಮರ್ಥರಾದವರನ್ನ ಕೈಬಿಡುತ್ತಾರೆ ಅಂದ್ರೆ ಇದು ಹೈಕಮಾಂಡ್ ಕುತಂತ್ರ. ನಾಯಕತ್ವ ಬದಲಾವಣೆ ಮಾಡಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಅನಕೂಲವಾಗಬಹುದು ಎಂದು ಹೇಳಿದರು.