ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂನಲ್ಲಿ ಹೈಟೆಕ್ ಆಸ್ಪತ್ರೆ ತಲೆ ಎತ್ತಲಿದೆ. ವಿಮ್ಸ್ ಆಸ್ಪತ್ರೆಗೆ ಪರ್ಯಾಯ ಆಸ್ಪತ್ರೆಯೊಂದು ಕಾರ್ಯಾರಂಭಿಸಲು ಸಜ್ಜಾಗಿದೆ.
ಅಂದಾಜು 150 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಟ್ರಾಮಾಕೇರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಕೇಂದ್ರ ಎಸಿ ಸೌಲಭ್ಯ ಹೊಂದಿದ್ದು, ಅಂದಾಜು 270 ಬೆಡ್‌ಗಳನ್ನು ನೀಡಲಾಗುತ್ತಿದೆ. ಅಂದಾಜು 18ಕ್ಕೂ ಅಧಿಕ ಅತ್ಯಾಧುನಿಕ ವೆಂಟಿಲೇಟರ್‌ಗಳು ಇಲ್ಲಿವೆ. ವಿಮ್ಸ್ ಆಸ್ಪತ್ರೆಯಲ್ಲಿ ಅಂದಾಜು 30 ವೆಂಟಿಲೇಟರ್ ಹೊಂದಿದ್ದು, ಆ ವೆಂಟಿಲೇಟರ್‌ಗಿಂತಲೂ ಇಲ್ಲಿರುವ ವೆಂಟಿಲೇಟರ್‌ಗಳು ವಿಭಿನ್ನವಾಗಿವೆ.
ಇಲ್ಲಿರುವ ವೆಂಟಿಲೇಟರ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿವೆ. ಇವುಗಳಲ್ಲಿ ಒಂದೆಡೆಯಿಂದ ಮತ್ತೊಂದೆಡೆ ಕೃತಕ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳನ್ನು ವೆಂಟಿಲೇಟರ್ ಸಮೇತ ಸಾಗಿಸಬಹುದು. ಇದರಿಂದ ರೋಗಿಯ ಜೀವರಕ್ಷಣೆಗೆ ಸಹಕಾರಿಯಾಗಲಿದೆ. ಈ ಹಿಂದಿನ ವೆಂಟಿಲೇಟರ್‌ಗಳಲ್ಲಿ ರೋಗಿಯ ಕೃತಕ ಉಸಿರಾಟದಲ್ಲಿ ಏರುಪೇರಾಗುವ ಸಾಧ್ಯತೆ ಇರೋದರಿಂದ ವಾರ್ಡಿನಿಂದ ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸುವಾಗ ರೋಗಿಯ ಜೀವಕ್ಕೂ ಕುತ್ತು ಬರುತ್ತಿತ್ತು.
ಟ್ರಾಮಾಕೇರ್ ಸೆಂಟರ್‌ನಲ್ಲಿ 4 ಭಾಗದಲ್ಲಿ ಚಕ್ರವುಳ್ಳ ಬೆಡ್‌ಗಳು ಹಾಗೂ ಸುಸಜ್ಜಿತ ಹಾಸಿಗೆ ಸೇರಿದಂತೆ ರೋಗಿಯು ಕೆಳಗಡೆ ಜಾರಿ ಬೀಳದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೈಡ್ ವಾಲ್‌ಗಳನ್ನು ಅಳವಡಿಸಲಾಗಿದೆ. ರೋಗಿಗಳ ಮನೋಲ್ಲಾಸಗೊಳಿಸುವ ಸಲುವಾಗಿ ಮ್ಯೂಸಿಕ್ ಸಿಸ್ಟಮ್ಸ್ ಅಳವಡಿಸಲಾಗಿದೆ. ತುರ್ತು ಅಪಘಾತ ಅಥವಾ ಗಂಭೀರ ಸ್ವರೂಪದ ಕಾಯಿಲೆಯುಳ್ಳವರನ್ನು ಕೇಂದ್ರದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ದೇವಾನಂದ, ಟ್ರಾಮಾಕೇರ್ ಸೆಂಟರ್‌ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗೆ ನಮ್ಮ ಮೊದಲ ಆದ್ಯತೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲನೇಯ ಆದ್ಯತೆ ಕೋವಿಡ್ ಸೋಂಕಿತರಿಗೆ ಸುಸಜ್ಜಿತ ಬೆಡ್‌ಗಳನ್ನು ಒದಗಿಸುವುದಾಗಿದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಐಸಿಯು ಬೆಡ್‌ಗಳ ಅಗತ್ಯವಿದೆ. ಶೀಘ್ರವೇ ಇದರ ಬಳಕೆಗೆ ಕ್ರಮ ವಹಿಸಲಾಗುವುದು ಎಂದರು.