ಬಳ್ಳಾರಿ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ನೂರಾರು ಕಚ್ಚಾ ಮನೆಗಳು ಜಖಂಗೊಂಡಿದೆ. ಸಂಡೂರು ತಾಲೂಕಿನ ನಾನಾ ಗ್ರಾಮಗಳಲ್ಲಿನ ಅಂದಾಜು 38 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಸಂಡೂರು ಹೋಬಳಿಯ ತಾರಾನಗರದಲ್ಲಿ 2, ತೋರಣಗಲ್ಲು ಹೋಬಳಿಯ ವಿಠಲಾಪುರದಲ್ಲಿ 7, ರಾಮಸಾಗರ ಹಾಗೂ ಅಂತಾಪುರದಲ್ಲಿ 3, ರಾಜಾಪುರ, ನಾಗಲಾಪುರ ಹಾಗೂ ಮೆಟ್ರಿಕಿಯಲ್ಲಿ ತಲಾ 2, ಬನ್ನಿಹಟ್ಟಿ, ಸುಲ್ತಾನಪುರದಲ್ಲಿ ತಲಾ 1 ಹಾಗೂ ಚೋರನೂರು ಹೋಬಳಿಯ ಸಿ.ಕೆ.ಹಳ್ಳಿಯಲ್ಲಿ 4, ಅಂಕಮನಾಳು, ತೊಣಸಿಗೆರೆ ಹಾಗೂ ಕಾಟಿನಕಂಬದಲ್ಲಿ ತಲಾ 2, ಶ್ರೀರಾಮಶೆಟ್ಟಿಹಳ್ಳಿ, ಹೊಸ ಜೋಗಿಕಲ್ಲು, ಬಿ.ಗೊಲ್ಲರ ಹಟ್ಟಿ ಹಾಗೂ ಬಂಡ್ರಿಯಲ್ಲಿ ತಲಾ ಒಂದೊಂದು ಮನೆಗಳು ಹಾನಿಗೀಡಾಗಿವೆ.
ಸಂಡೂರು, ಚೋರನೂರು ಹಾಗೂ ಕುರೇಕುಪ್ಪ ಮಳೆ ಮಾಪನ ಕೇಂದ್ರಗಳಲ್ಲಿ ಭಾನುವಾರ, ಸೋಮವಾರದಂದು ಕ್ರಮವಾಗಿ 12.6 ಮಿ.ಮೀ., 57.3 ಮಿ.ಮೀ. ಹಾಗೂ 15.3 ಮಿ.ಮೀ. ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ, ಸಿರುಗುಪ್ಪ- ಹೊಸಪೇಟೆ ತಾಲೂಕಿನಾದ್ಯಂತ ಕಚ್ಚಾ ಮನೆಗಳು ಕುಸಿದಿವೆ. ಕಳೆದ ಬಾರಿ ಕುಸಿದು ಬಿದ್ದಿರುವ ಮನೆಗಳಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡುವಲ್ಲಿ ಯಶಸ್ಸು ಕಂಡಿದೆ.