ಬಳ್ಳಾರಿ: ಕಳೆದ 3 ದಿನಗಳಿಂದ ಗಣಿ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಹಾಮಳೆಗೆ ಸುಮಾರು 210.76 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿನ ಬೆಳೆ ನಷ್ಟ ಉಂಟಾಗಿದ್ದು, ಅಂದಾಜು 140ಕ್ಕೂ ಅಧಿಕ ಕಚ್ಚಾ ಮನೆಗಳು ಭಾಗಶಃ ಕುಸಿತಗೊಂಡಿವೆ.
ಅ. 10ರಿಂದ 13ರವರೆಗೆ ಸುರಿದ ಮಹಾಮಳೆಗೆ ಜಿಲ್ಲೆಯ 11 ತಾಲೂಕುಗಳಲ್ಲೂ ಕೂಡ ಈ ಬೆಳೆ ನಷ್ಟ ಉಂಟಾಗಿದೆ. ಅಂದಾಜು 198.5 ಹೆಕ್ಟೇರ್ನಷ್ಟು ಕೃಷಿ ಬೆಳೆ ಹಾಗೂ 12.26 ಹೆಕ್ಟೇರ್ನಷ್ಟು ತೋಟಗಾರಿಕೆ ಬೆಳೆ ನಷ್ಟ ಉಂಟಾಗಿದೆ. ಸಿರುಗುಪ್ಪ ತಾಲೂಕಿನಾದ್ಯಂತ ಅಂದಾಜು 140 ಹೆಕ್ಟೇರ್ನಷ್ಟು ಬೆಳೆ ನಷ್ಟ ಉಂಟಾಗಿದೆ. ಉಳಿದಂತೆ ಹೊಸಪೇಟೆ, ಹರಪನಹಳ್ಳಿ ತಾಲೂಕಿನಾದ್ಯಂತ ಸರಾಸರಿ 25-20 ಹೆಕ್ಟೇರ್ನಷ್ಟು ಬೆಳೆ ನಷ್ಟ ಉಂಟಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮಾತ್ರ 12.26 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ನಾನಾ ತೋಟಗಾರಿಕೆ ಬೆಳೆ ನಷ್ಟ ಉಂಟಾಗಿದೆ.
ಇನ್ನು ಬಳ್ಳಾರಿ ಮತ್ತು ಕುರುಗೋಡು, ಕಂಪ್ಲಿ, ಕೊಟ್ಟೂರು ಹಾಗೂ ಹೂವಿನಹಡಗಲಿ ತಾಲೂಕಿನಾದ್ಯಂತ ಯಾವುದೇ ಬೆಳೆ ನಷ್ಟ ಉಂಟಾಗಿರುವುದರ ಕುರಿತು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ ಜಿಲ್ಲೆಯ 11 ತಾಲೂಕುಗಳ ನಾನಾ ಗ್ರಾಮೀಣ ಭಾಗದಲ್ಲಿನ 140 ಕಚ್ಚಾ ಮನೆಗಳು ಭಾಗಶಃ ಕುಸಿದು ಬಿದ್ದಿವೆ.
ಬಳ್ಳಾರಿ ತಾಲೂಕು-7, ಸಿರುಗುಪ್ಪ ತಾಲೂಕು-2, ಸಂಡೂರು ತಾಲೂಕು-22, ಕುರುಗೋಡು ತಾಲೂಕು-1, ಹೊಸಪೇಟೆ ತಾಲೂಕು-16, ಕಂಪ್ಲಿ ತಾಲೂಕು-3, ಹಗರಿಬೊಮ್ಮನಹಳ್ಳಿ ತಾಲೂಕು-26, ಕೂಡ್ಲಿಗಿ ತಾಲೂಕು-9, ಕೊಟ್ಟೂರು ತಾಲೂಕು-16, ಹಡಗಲಿ ತಾಲೂಕು-18, ಹರಪನಹಳ್ಳಿ ತಾಲೂಕು-20 ಕಚ್ಚಾ ಮನೆಗಳು ಕುಸಿದು ಬಿದ್ದಿವೆ. ಈ ಎಲ್ಲಾ ಮನೆಗಳಿಗೆ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಿಕೊಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.