ಬಳ್ಳಾರಿ: ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ಜನ- ಜಾನುವಾರುಗಳ ಜೀವನ ಅಸ್ತವ್ಯಸ್ತಗೊಂಡಿದೆ. ಸಂಡೂರು ತಾಲೂಕಿನ ಕೆಲ ಸೇತುವೆಗಳು ಈ ಮಳೆಯ ನೀರಿನಿಂದ ಜಲಾವೃತಗೊಂಡಿದ್ದು, ಆ ಮಾರ್ಗದಲ್ಲಿನ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಜಿಲ್ಲೆಯ ಸಂಡೂರು ತಾಲೂಕಿನ ನಾನಾ ಗ್ರಾಮಗಳಲ್ಲಿನ ಕಚ್ಚಾ ಮನೆಗಳಿಗೆ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಎರಡು ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿರೋದು ಬಿಟ್ಟರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಹಾಮಳೆಗೆ ಜಿಲ್ಲೆಯ ಸಂಡೂರು ಹೋಬಳಿಯಲ್ಲಿ 6 ಮನೆ, ಚೋರುನೂರು ಹೋಬಳಿಯಲ್ಲಿ 3 ಮನೆಗಳಿಗೆ ಹಾನಿ ಉಂಟಾಗಿದೆ. ಸೋವೆನಹಳ್ಳಿ ಗ್ರಾಮದ ಹನುಮಂತಪ್ಪ ಎಂಬುವರಿಗೆ ಸೇರಿದ ಎರಡು ಎಮ್ಮೆಗಳು ಮೃತಪಟ್ಟಿವೆ.
ಸಂಡೂರಿನ ತಾರಾನಗರ ಗ್ರಾಮದಲ್ಲಿ 2, ನಾರಾಯಣಪುರ ಗ್ರಾಮದಲ್ಲಿ 3, ಕೃಷ್ಣಾನಗರದಲ್ಲಿ 1, ಚೋರುನೂರು ಹೋಬಳಿಯ ಬೊಮ್ಮಗಟ್ಟ, ಡಿ.ಮಲ್ಲಾಪುರ ಹಾಗೂ ಜಿಗೆನಹಳ್ಳಿಯಲ್ಲಿ ತಲಾ ಒಂದೊಂದು ಮನೆಗೆ ಹಾನಿಯಾಗಿದೆ ಎಂದು ಕಂದಾಯ ನಿರೀಕ್ಷಕರು ತಿಳಿಸಿದ್ದಾರೆ.
ಬಳ್ಳಾರಿ- 4.5, ಹೂವಿನಹಡಗಲಿ - 3.2, ಹಗರಿಬೊಮ್ಮನಹಳ್ಳಿ- 15.8, ಹರಪನಹಳ್ಳಿ- 49.2, ಹೊಸಪೇಟೆ- 3.0, ಕೂಡ್ಲಿಗಿ- 16.7, ಸಂಡೂರು- 44.2, ಕೊಟ್ಟೂರು- 43.0 ಮಿಲಿಮೀಟರ್ ನಷ್ಟು ಮಳೆ ಸುರಿದಿದ್ದು, ಸಿರುಗುಪ್ಪ - ಕುರುಗೋಡು ಹಾಗೂ ಕಂಪ್ಲಿ ಭಾಗದಲ್ಲಿ ಮಳೆಯೇ ಸುರಿದಿಲ್ಲ ಎಂದು ಜಿಲ್ಲಾ ಸಾಂಖ್ಯಿಕ ಇಲಾಖೆ ತಿಳಿಸಿದೆ.