ಬಳ್ಳಾರಿ: ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ್ರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು. ಆದ್ರೆ ಅವರು ದುಂಡಾವರ್ತನೆ ತೋರಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪತ್ರಕರ್ತರಿಗೆ ಕೊರೊನಾ ತಪಾಸಣೆಯನ್ನು ಆಯೋಜಿಸಲಾಗಿತ್ತು. ಆದರೆ ಎಂಎಲ್ಸಿ ಶ್ರೀಕಂಠೇಗೌಡ್ರು ತಮ್ಮ ಪುತ್ರ ಕೃಷಿಕ್ಗೌಡನನ್ನು, ಎತ್ತಿಕಟ್ಟಿ ದುಂಡಾವರ್ತನೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.
ಅವರು ಒಬ್ಬ ಹಿರಿಯ ಅನುಭವಿ ರಾಜಕಾರಣಿ. ಈ ರೀತಿ ಬೀದಿಗಿಳಿದು ಜಗಳ ಮಾಡಬಾರದಿತ್ತು. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಇನ್ಮುಂದೆ ಯಾವುದೇ ರೀತಿಯ ದುರ್ಘಟನೆ ಆಗಬಾರದೆಂದು ಮನವಿ ಮಾಡುತ್ತೇನೆ. ಅವರ ವಿರುದ್ಧ ಕಾನೂನು ಕ್ರಮವಾಗುತ್ತದೆ ಎಂದರು. ಪಾದರಾಯನಪುರ ಸೇರಿದಂತೆ ನಾನಾ ಕಡೆ ಈ ರೀತಿಯ ಘಟನೆ ನಡೆದಿದ್ದು, ಇದು ಪುನರಾವರ್ತನೆ ಆಗಬಾರದು ಎಂದ್ರು.
ಪತ್ರಕರ್ತರು ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಪತ್ರಕರ್ತರ ಮೇಲೆ ನಾನಾ ಕಡೆ ಹಲ್ಲೆಯಾಗುತ್ತಿವೆ. ಅವರ ಮತ್ತು ಅವರ ಕುಟುಂಬದ ರಕ್ಷಣೆ ನಮ್ಮ ಸರ್ಕಾರದ ಹೊಣೆಯಾಗಿದ್ದು, ಪತ್ರಕರ್ತರಿಗೆ ಕೋವಿಡ್ -19 ಉಚಿತ ಚಿಕಿತ್ಸೆ ಆಗಬೇಕೆಂದು ತುರ್ತು ಚಿಕಿತ್ಸೆ ಚೆಕ್ಅಪ್ ಮಾಡಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಪ್ಲಾಸ್ಮಾ ಥೆರಪಿ ನಾಳೆಯಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಪ್ಲಾಸ್ಮಾ ಥೆರಪಿಗೆ ರಕ್ತದಾನ ಮಾಡಲು ಗುಣಮುಖರಾದವರು ಮುಂದೆ ಬರಬೇಕೆಂದು ಮನವಿ ಮಾಡಿದ್ರು. ರಾಜ್ಯದ ನಂಜನಗೂಡು, ಮೈಸೂರಿನಲ್ಲಿ ಹೆಚ್ಚು ಪ್ರಕರಣ ಬಂದಿವೆ. ಜುಬಿಲಂಟ್ ಕಾರ್ಖಾನೆ ಪಾಸಿಟಿವ್ ಮೂಲ ಯಾವುದೆಂದು ಇದುವರೆಗೆ ಗೊತ್ತಾಗಿಲ್ಲ ಎಂದು ಹೇಳಿದರು. ಹೀಗಾಗಿ ಈ ಬಗ್ಗೆ ನಾಳೆ ನಡೆಯಲಿರುವ ಪ್ರಧಾನಿ ಮೋದಿಯವರ ವಿಡಿಯೋ ಕಾನ್ಫರೆನ್ಸ್ನಲ್ಲಿ ಗಮನಕ್ಕೆ ತರುವುದಾಗಿ ತಿಳಿಸಿದ್ರು.
ಮಾಜಿ ಸಿಎಂ ಸಿದ್ದರಾಮಯ್ಯನವರು, ಸಿಎಂ ಯಡಿಯೂರಪ್ಪಗೆ ಪತ್ರ ಬರೆದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುವವರಿಗೆ ಸಮಸ್ಯೆಯಾಗಿದೆ ಅಂದಿದ್ರು. ಈ ವಿಷಯ ನನ್ನ ಗಮನಕ್ಕೆ ಬಂದ ನಂತರ ನಾನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಧಿಗಳೊಂದಿಗೆ ಮಾತನಾಡಿದ್ದೇನೆ. ಡೆಂಗ್ಯೂ ಜ್ವರ, ಹೃದಯ ಸಂಬಂಧಿ ಕಾಯಿಲೆಯ ಸಮಸ್ಯೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡಿ ಎಂದು ಸೂಚಿಸಿರುವುದಾಗಿ ಹೇಳಿದ್ರು.