ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಸತಿ ನಿಲಯದ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಾಗಿದ್ದ ನಿಲಯ ನಿಗದಿತ ಸಮಯದಲ್ಲಿ ಪೂರ್ಣಗೊಂಡಿಲ್ಲ. ಇದು ವಿದ್ಯಾರ್ಥಿಗಳಿಗೆ ಸಂಕಷ್ಟಕ್ಕೆ ತಂದೊಡ್ಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎರಡು ವಸತಿ ನಿಲಯಗಳ ನಿರ್ಮಾಣಕ್ಕೆ 2017 ಸೆ.17 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. 2018 ಸೆಪ್ಟೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, 2020 ವರ್ಷ ಮುಗಿಯುತ್ತಿದ್ದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಬೇಸರನ್ನುಂಟು ಮಾಡಿದೆ. ವಿವಿ ಆವರಣದ ಅನನ್ಯ ವಸತಿ ನಿಲಯದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಇನ್ನು 100 ವಿದ್ಯಾರ್ಥಿಗಳಿಗೆ ವಸತಿ ಸಮಸ್ಯೆ ಇದೆ. ಹಾಗಾಗಿ ಅವರು ಕಮಲಾಪುರದ ಬಾಡಿಗೆ ಕೊಠಡಿಯಲ್ಲಿ ವಾಸಿಸುವಂತ ಪರಿಸ್ಥಿತಿ ಇದೆ. ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಹೆಚ್ಚುವರಿ ಹಣ ಪಾವತಿಸುವ ಪರಿಸ್ಥಿತಿ ಬಂದಿದೆ.
ಹಾಸ್ಟೆಲ್ ಉದ್ಘಾಟನೆಗೆ ಆಗ್ರಹ:
ಈ ಒಂದೇ ಕೊಠಡಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ವಾಸಿಸಬಹುದಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಒಂದು ಕೊಠಡಿಯಲ್ಲಿ ಇಷ್ಟು ಜನ ವಾಸಿಸುವುದು ಸಮಂಜಸವಲ್ಲ. ಹಾಗಾಗಿ ಸರ್ಕಾರ ವಿಶ್ವವಿದ್ಯಾಲಯ ಪ್ರಾರಂಭ ಮಾಡುವ ಮುನ್ನ ಹಾಸ್ಟೆಲ್ಗಳನ್ನು ಉದ್ಘಾಟಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಶಿಲಾನ್ಯಾಸ ಕಲ್ಲು ಮಾಯ:
ದಿನಾಂಕ ಹಾಗೂ ಉದ್ಘಾಟನೆ ಮಾಡಿದವರ ಮಾಹಿತಿಯನ್ನು ಒಳಗೊಂಡ ಶಿಲಾನ್ಯಾಸ ಕಲ್ಲು ಗೋಡೆಯಿಂದ ಮಾಯವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಎಸ್ಸಿ ಹಾಗೂ ಎಸ್ಟಿ ವಸತಿ ನಿಲಯಗಳಿಗೆ ಶಿಲಾನ್ಯಾಸ ಕಲ್ಲನ್ನು ಹಾಕಲಾಗಿತ್ತು. ಮಾಹಿತಿ ಮರೆ ಮಾಚಲು ಕಲ್ಲನ್ನು ತೆರವುಗೊಳಿಸಿರಬಹುದು ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿಂದೆ ನೀರಿನ ಸಮಸ್ಯೆ ಇತ್ತು. ಹಾಗಾಗಿ ಕಟ್ಟಡ ನಿರ್ಮಾಣವನ್ನು ನಿಲ್ಲಿಸಲಾಗಿತ್ತು. ಈ ಕುರಿತು ವಿವಿಯ ಕುಲಪತಿ ಡಾ.ಸ.ಚಿ.ರಮೇಶ ಅವರು ಸ್ಟಷ್ಟನೆ ನೀಡಿದ್ದರು. ಆದರೆ, ಈಗ ವಿವಿಯ ಕೆರೆ ತುಂಬಿ ತುಳುಕುತ್ತಿದೆ. ನೀರಿನ ಸಮಸ್ಯೆ ಯಾವುದೂ ಇಲ್ಲ. ಕಟ್ಟಡ ಪೂರ್ಣಗೊಳಿಸಿ ಉದ್ಘಾಟನೆ ಮಾಡಬಹುದಿತ್ತು. ಕಟ್ಟಡ ನಿರ್ಮಾಣ ಕುರಿತು ಸ್ವತಃ ವಿವಿಯ ಅಧಿಕಾರಿಗಳಿಗೆ ತಿಳಿದಿಲ್ಲ.
ಎರಡು ನಿಲಯಕ್ಕೆ ಬೀಗ ಜಡಿಯಲಾಗಿದೆ. ಈಗ ಅಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಆದರೆ, ಉದ್ಘಾಟನೆಯಾಗದೆ ಉಳಿದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. 2018 ರಲ್ಲಿ ವಸತಿ ನಿಲಯಗಳು ಉದ್ಘಾಟನೆಯಾಗಬೇಕಿತ್ತು. ಆದರೆ, ಇನ್ನೂ ಉದ್ಘಾಟನೆವಾಗಿಲ್ಲ. ಈ ಹಿಂದೆ ನೀರಿನ ಸಮಸ್ಯೆ ಕಾರಣವನ್ನು ನೀಡಲಾಗಿತ್ತು. ಆದರೆ, ಈಗ ಯಾವ ಸಮಸ್ಯೆ ಇದೆ? ಕೊರೊನಾ ಹಿನ್ನೆಲೆ ವಸತಿಗಾಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತ ಸ್ಥಿತಿ ಇದೆ. ವಿವಿ ಪ್ರಾರಂಭ ಮುನ್ನ ಎರಡು ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು ಆಗ್ರಹಿಸಿದರು.
ಈಟಿವಿ ಭಾರತದೊಂದಿಗೆ ಕುಲಪತಿ ಡಾ.ಸ.ಚಿ. ರಮೇಶ ಅವರು ಮಾತನಾಡಿ, ವಿದ್ಯಾರ್ಥಿ ನಿಲಯಗಳ ಕುರಿತು ಎಂಜಿನಿಯರ್ಗೆ ತಿಳಿದಿರುತ್ತದೆ. ನಮಗೆ ತಿಳಿದಿಲ್ಲ. ಬಾಕಿ ಉಳಿದಿರುವ ಸಣ್ಣ-ಪುಟ್ಟ ಕೆಲಸದಿಂದ ಇನ್ನು ಉದ್ಘಾಟನೆ ಮಾಡಿಲ್ಲ. ಅಲ್ಲದೇ, ಶಿಲಾನ್ಯಾಸ ಕಲ್ಲು ಇಲ್ಲದಿರುವುದು ತಿಳಿದಿಲ್ಲ. ಈ ಕುರಿತು ಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.