ಹೊಸಪೇಟೆ (ಬಳ್ಳಾರಿ): ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಬಿಡುತ್ತಿದ್ದ ನೀರಿನ ಪ್ರಮಾಣ ತಗ್ಗಿದ್ದು, ಹಂಪಿಯ ನದಿಪಾತ್ರದಲ್ಲಿ ಮುಳಗಡೆಯಾಗಿದ್ದ ಸ್ಮಾರಕಗಳಿಗೆ ಇಂದು ಜೀವಕಳೆ ಬಂದಿದೆ. ತುಂಗಭದ್ರಾ ಜಲಾಶಯ ಹೊರಹರಿವು ಇಳಿಮುಖವಾಗಿದ್ದರಿಂದ ಹಂಪಿ ನದಿಪಾತ್ರದ ಸ್ಮಾರಕಗಳು ಗೋಚರಿಸುತ್ತಿವೆ.
ಹಂಪಿಯ ಮೂರು ಕರ್ಮಾದಿ ಮಂಟಪಗಳು ಕೆಲ ದಿನಗಳ ಹಿಂದೆ ಮುಳುಗಿ ಹೋಗಿದ್ದವು. ಈಗ ಅವುಗಳು ನೀರಿನಿಂದ ಮುಕ್ತವಾಗಿವೆ. ಚಕ್ರತೀರ್ಥ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ದೇವಸ್ಥಾನಗಳಿಗೆ ಭಕ್ತರು ಕಾಲುದಾರಿಯ ಮೂಲಕ ತೆರಳಿ ದರ್ಶನ ಪಡೆದರು. ಈ ಮೊದಲು ಕಾಲು ದಾರಿ ಜಲಾವೃತಗೊಂಡಿತ್ತು. ಹಾಗಾಗಿ ಭಕ್ತರು ಬಸವಣ್ಣ ಮಾತಾಂಗ ಪರ್ವತದ ಮೂಲಕ ದೇವಸ್ಥಾನಗಳಿಗೆ ತೆರಳುವಂತಾಗಿತ್ತು.
ಈದಿನ ಸಾಲುಮಂಟಪ, ಜನಿವಾರ ಮಂಟಪ, ಪುರಂದರ ಮಂಟಪ ಸೇರಿ ನದಿಪಾತ್ರದ ಸ್ಮಾರಕಗಳು ಸಹಜ ಸ್ಥಿತಿಗೆ ಮರಳಿದ್ದಾವೆ. ಅಲ್ಲದೆ ಸ್ನಾನಘಟ್ಟದಲ್ಲಿ ಎಂದಿನಂತೆ ಭಕ್ತರು ಸ್ನಾನ ಮಾಡಿ ದೇವರ ದರ್ಶನ ಪಡೆದುಕೊಂಡರು.