ಹೊಸಪೇಟೆ: ನಾಡದೇವತೆ ಭುವನೇಶ್ವರಿ ದೇವಸ್ಥಾನವನ್ನು ಹಂಪಿ ವಿರೂಪಾಕ್ಷೇಶ್ವರನ ಎಡಭಾಗದಲ್ಲಿ ಕಾಣಬಹುದಾಗಿದೆ. 7 ಅಥವಾ 8ನೇ ಶತಮಾನದಲ್ಲಿ ದೇವಾಲಯವನ್ನು ನಿರ್ಮಿಸಿರಬಹುದು ಎಂಬುದು ಶಾಸನಗಳಲ್ಲಿ ಉಲ್ಲೇಖವಾಗಿದೆ.
ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ದೇವಸ್ಥಾನವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಾಡಹಬ್ಬ ಎಂದೇ ಬಿಂಬತವಾಗಿರುವ ಮೈಸೂರಿನ ದಸರಾ ವಿಜಯನಗರ ಸಾಮ್ರಾಜ್ಯದ ಪರಿಕಲ್ಪನೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಈಗ ನಾಡದೇವತೆಯ ದೇವಸ್ಥಾನ ಮೊದಲ ಬಾರಿಗೆ ಸ್ಥಾಪನೆ ಮಾಡಿರುವುದು ಹಂಪಿಯಲ್ಲಿ ಎಂಬುದು ಕೌತುಕದ ವಿಷಯವಾಗಿದೆ.
ಭುವನ ಎಂದರೆ ಭೂಮಿ, ವಸುಂದರೆ, ಸಂಪತ್ತು ಎಂಬ ಅರ್ಥವನ್ನು ನೀಡುತ್ತದೆ. ಅಂದರೆ, ಕಲ್ಯಾಣ ಚಾಲುಕ್ಯರ ಭೂಮಿ ತಾಯಿಗೆ ಗೌರವ ನೀಡುವ ಸಲುವಾಗಿ ದೇವಸ್ಥಾನ ಸ್ಥಾಪಿರಬಹುದು. ಇದು ಕರ್ನಾಟಕದ ಮೊದಲ ನಾಡದೇವತೆ ಭುವನೇಶ್ವರಿ ದೇವಿಯ ದೇವಾಲಯವಾಗಿರಬಹುದು ಎಂಬುದು ಸಂಶೋಧಕರ ಬಲವಾದ ಮಾತಾಗಿದೆ.
ದೇವಸ್ಥಾನವು ಬಸಾಲ್ಟ್ ಶಿಲೆಯಲ್ಲಿ ಮಾಡಿದ ಇಲ್ಲಿನ ದುಂಡಾದ ಕಂಬಗಳು, ಛಾವಣಿ ಮತ್ತು ದ್ವಾರಬಂಧಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಇವುಗಳು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಕುಶಲ ಕಲೆಯಲ್ಲಿವೆ. ವಾಸ್ತುಶಿಲ್ಪದ ಶಾಸ್ತ್ರದಲ್ಲಿ ಗರ್ಭಗುಡಿಯ ಮೇಲ್ಭಾಗವನ್ನು ಭುವನೇಶ್ವರಿ ಎಂದು ಕರೆಯಲಾಗುತ್ತದೆ. ದೇವಸ್ಥಾನವನ್ನು ವಾಸ್ತುವಿನ ಆಧಾರದ ಮೇಲೆ ಶಾಸ್ತ್ರೋಕ್ತವಾಗಿ ನಿರ್ಮಿಸಿರುವುದು ತಿಳಿದು ಬರುತ್ತದೆ.
ವಿಜಯನಗರ ಕಾಲದಲ್ಲಿ ಭುವನೇಶ್ವರಿ ದೇವಿಗೆ ಮತ್ತೊಂದು ಹೆಸರಿನಿಂದ ಕರೆಯಲಾಗುತ್ತಿತ್ತು. ಅದೇನೆಂದರೆ ಚಿಕ್ಕ ಹಂಪಾ ದೇವಿ. ಶ್ರೀಕೃಷ್ಣ ದೇವರಾಯ ತನ್ನ ಆಸ್ಥಾನಕ್ಕೆ ಭುವನವಿಜಯ ಎಂಬ ಹೆಸರನ್ನು ನಾಮಕರಣ ಮಾಡಿದ್ದ. ಇದಕ್ಕೆ ಪ್ರೇರಣೆಯೂ ಭುವನೇಶ್ವರಿ ದೇವಿಯಾಗಿರಬಹುದು.
ಭುವನೇಶ್ವರಿ ದೇವಸ್ಥಾನವು ಕನ್ನಡಿಗರ ಅಸ್ಮಿತೆಯಾಗಿದೆ. ಅದು ಹಂಪಿ ಭಾಗದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಭುವನೇಶ್ವರಿ ಮೂರ್ತಿಯು ಅತ್ಯಾಕರ್ಷಣೆಯಿಂದ ಕೂಡಿದ್ದು, ಹಂಪಿಯ ಭಾಗದಲ್ಲಿ ಇಷ್ಟೊಂದು ಸೂಕ್ಷ್ಮ ಕೆತ್ತನೆ ಕಾಣಸಿಗುವುದಿಲ್ಲ. ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿರುವ ಕಲ್ಯಾಣ ಚಾಲುಕ್ಯರ ಶೈಲಿಯು ಅತ್ಯಾಕರ್ಷಣೆಯಿಂದ ಕೂಡಿದೆ ಎಂಬುದಕ್ಕೆ ದೇವಸ್ಥಾನ ಕೈಗನ್ನಡಿಯಾಗಿದೆ.