ಹೊಸಪೇಟೆ: ವಿಶ್ವವಿಖ್ಯಾತ ಈ ಬಾರಿಯ ಹಂಪಿ ಉತ್ಸವವನ್ನು ಇದೇ ನವೆಂಬರ್ 13 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಪ್ರತಿವರ್ಷ ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಅತ್ಯಂತ ವಿಜೃಂಭಣೆಯಿಂದ ಹಂಪಿ ಉತ್ಸವ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆ ನವೆಂಬರ್ 13 ರಂದು ಒಂದು ದಿನ ಸರಳ, ಸಾಂಕೇತಿಕವಾಗಿ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದು ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವಿವಿಧ ರೀತಿಯ ಜನಪದ ಕಲಾತಂಡಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಪ್ರತಿ ತಾಲೂಕಿನಿಂದ ಎರಡೆರಡು ಕಲಾತಂಡಗಳು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ. ಶೋಭಾಯಾತ್ರೆ ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿ ದಡದಲ್ಲಿ ತುಂಗಾ ಆರತಿ ನಡೆಯಲಿದೆ. ಯಾವುದೇ ರೀತಿಯ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸಚಿವರು ವಿವರಿಸಿದ್ದಾರೆ.