ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರನ ಜಾತ್ರೆ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ವೀರಭದ್ರೇಶ್ವರನ ರಥೋತ್ಸವದ ಹಿನ್ನೆಲೆಯಲ್ಲಿ ಹಳೇಕೋಟೆ ಗ್ರಾಮದಲ್ಲಿ ವಾದ್ಯಮೇಳಗಳ ಸದ್ದು ಜೋರಾಗಿತ್ತು. ಜಾತ್ರೆಗೆ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಭಕ್ತರು ಸನ್ನಿಧಾನದಲ್ಲಿ ರಾತ್ರಿಯೇ ಬೀಡುಬಿಟ್ಟಿದ್ದರು. ಇಂದು ಬೆಳಗಿನಜಾವ ಅಗ್ನಿಕುಂಡ ಸೇರಿದಂತೆ ಇನ್ನಿತರೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಗ್ರಾಮದ ರಾಜ ಬೀದಿಯಲ್ಲಿ ವೀರಭದ್ರೇಶ್ವರನ ಮಡೆತೇರನ್ನು ಎಳೆಯಲಾಯಿತು. ಬಾಳೆಹಣ್ಣು, ನಿಂಬೆಹಣ್ಣು ಸಮರ್ಪಿಸಿ ಭಕ್ತರು ಭಕ್ತಿ ಮೆರೆದರು.
ಅಗ್ನಿಕುಂಡದಲಿ ಮಹಿಳೆಯರ ಪಾದಸ್ಪರ್ಶ:
ಹಿಮದ ಕಾರ್ಮೋಡದಲ್ಲೂ ಈ ದಿನ ಬೆಳ್ಳಂಬೆಳಗ್ಗೆ ಮಹಿಳೆಯರು, ಪುರುಷರು ಹಾಗೂ ಚಿಣ್ಣರು, ಯುವಕ-ಯುವತಿಯರು ಮಡೆಸ್ನಾನ ಮಾಡಿ ಅಗ್ನಿಕುಂಡ ಪಾದಸ್ಪರ್ಶ ಮಾಡಿದರು. ಆ ಮೂಲಕ ವೀರಭದ್ರೇಶ್ವರನಿಗೆ ತಮ್ಮ ಭಕ್ತಿಯನ್ನು ತೋರ್ಪಡಿಸಿದರು. ಈ ದೃಶ್ಯಕ್ಕೆ ಭಕ್ತಗಣ ಸಾಕ್ಷಿಯಾಗಿತ್ತು.