ಬಳ್ಳಾರಿ: ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಜಿಲ್ಲೆಯ ವಿವಿಧೆಡೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅವುಗಳ ಮೆರವಣಿಗೆ ಮಾಡಲಾಯಿತು.
ರೈತಾಪಿ ವರ್ಗ ಹಾಗೂ ಬಡ ಮತ್ತು ಕೂಲಿ ಕಾರ್ಮಿಕ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿನ ದೇವರ ಜಗಲಿ ಮೇಲಿಟ್ಟು ಪೂಜೆ ಸಲ್ಲಿಸಿದ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಆಯಾ ಗ್ರಾಮಗಳಲ್ಲಿ ಅಗಸೆ ಕಟ್ಟೆಯ ಮಾರ್ಗವಾಗಿ ಓಡುತ್ತಾ ಹಬ್ಬಕ್ಕೆ ಮೆರಗು ತಂದರು.
ಬಳ್ಳಾರಿ ಹಾಗೂ ಕುರುಗೋಡು ತಾಲೂಕಿನ ಹಾವಿನಾಳು ವೀರಾಪುರ, ಮುಷ್ಠಗಟ್ಟೆ, ಗೆಣಿಕೆಹಾಳು, ಬೇವಿನಹಳ್ಳಿ, ಬಿಸಿಲ ಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಕಾರೇಕಲ್ಲು ವೀರಾಪುರ, ಮಸೀದಿಪುರ, ಮೋಕಾ, ಹಗರಿ, ರೂಪನಗುಡಿ, ಚೇಳ್ಳಗುರ್ಕಿ, ಜೋಳದರಾಶಿ, ಕೆ.ಕೆ.ಹಾಳು, ದಾಸರ ನಾಗೇನಹಳ್ಳಿ, ಹೊಸ ಮೋಕಾ ಸೇರಿದಂತೆ ಉಭಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಜೋರಾಗಿತ್ತು.
ಗ್ರಾಮದ ಅಗಸೆಕಟ್ಟೆಯಲ್ಲಿ ಬೇವಿನಮರದ ಸೊಪ್ಪನ್ನು ಕಟ್ಟಿ ನೂರಾರು ಮಕ್ಕಳು ಓಡುತ್ತಲೇ ಕರಿ ಹರಿದರು. ಮೊದಲು ಬಂದವರಿಗೆ ಬೇವಿನ ಮರದ ಸೊಪ್ಪಿನ ಹಾರವನ್ನು ಹಾಕುವ ಮುಖೇನ ವಿಜಯದ ನಗೆ ಬೀರುವ ದೃಶ್ಯವಂತೂ ಸಾಮಾನ್ಯವಾಗಿ ಕಂಡು ಬಂತು.