ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಸಾರಿಗೆ ಸಂಸ್ಥೆ ನೌಕರರ ಮುಷ್ಕರ 5ನೇ ದಿನವಾದ ಭಾನುವಾರವೂ ಮುಂದುವರೆದಿದ್ದು, ಜನಸಾಮಾನ್ಯರ ಸಂಕಷ್ಟವೂ ಹೀಗೆಯೇ ಮುಂದುವರೆದಿದೆ.
ಹಳ್ಳಿಗಳಿಂದ ತಮ್ಮ ಅಗತ್ಯ ಕೆಲಸ ಕಾರ್ಯಗಳಿಗೋಸ್ಕರ ನಗರ ಪ್ರದೇಶಗಳಿಗೆ ಬರುವ ಜನರು, ರೈತರ ತೊಂದರೆ ಕೊನೆಗೊಂಡಿಲ್ಲ. ಮಹಿಳೆಯರು, ಮಕ್ಕಳು ವಿವಿಧ ಗ್ರಾಮಗಳಿಗೆ ತೆರಳಲು ಬಸ್‌ಗಾಗಿ ಕಾದು ಸುಸ್ತಾದರು. ಇನ್ನುಳಿದಂತೆ ಅಲ್ಪಮಟ್ಟಿಗೆ ಆರಂಭವಾಗಿರುವ ಬಸ್ ಸಂಚಾರ ಕೆಲವರಿಗೆ ಮಾತ್ರ ಅನುಕೂಲಕರವಾಗಿದ್ದು, ಬಹುಪಾಲು ಮಂದಿಗೆ ತೊಂದರೆ ಹೇಳತೀರದಾಗಿದೆ.
60 ಬಸ್ ಸಂಚಾರ, 100 ಸಿಬ್ಬಂದಿ
5ನೇ ದಿನಕ್ಕೆ ಮುನ್ನುಗ್ಗಿರುವ ಮುಷ್ಕರದ ನಡುವೆಯೇ ಭಾನುವಾರ 60 ಬಸ್ ಸಂಚಾರ ಆರಂಭಿಸಿದ್ದು, 100 ಮಂದಿ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ.
ಬಳ್ಳಾರಿ ಡಿಪೋದ 46 ಹಾಗೂ ಹೊಸಪೇಟೆ 14 ಸೇರಿದಂತೆ ಮಂಗಳೂರು ಮತ್ತು ಕೊಪ್ಪಳದ ತಲಾ 1 ಬಸ್ ಸಂಚರಿಸಿದವು. ಹೆಚ್ಚಾಗಿ ಆಂಧ್ರ ಪ್ರದೇಶದ ಆದೋನಿ, ಗುಂತಕಲ್ಲು, ಅನಂತಪುರ, ತಿರುಪತಿಗಳುಗೆ ಬಳ್ಳಾರಿ ಡಿಪೋದಿಂದ 10ಕ್ಕೂ ಹೆಚ್ಚು ಬಸ್ಸುಗಳು ಸಂಚಾರ ಮಾಡಿದವು. ಅದರಲ್ಲಿ 10 ಜನರು ಮಾತ್ರ ಪ್ರಯಾಣ ಮಾಡಿದರು. 55 ವರ್ಷ ಮೇಲ್ಪಟ್ಟು ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಇನ್ನು ಸಿರುಗುಪ್ಪ, ರಾಯಚೂರು ಭಾಗಗಳಿಗೆ ನಾಲ್ಕೈದು ಬಸ್ಸುಗಳು ಸಂಚಾರ ಮಾಡಿದವು.