ಬಳ್ಳಾರಿ: ಜಿಲ್ಲೆಯ ಅಣತಿ ದೂರದಲ್ಲಿರುವ ಸಿರವಾರ ಗ್ರಾಮದ ಸರ್ಕಾರಿ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕವಾಗಿ ಪರಿಣಮಿಸಿದೆ.
ಈ ಶಾಲೆಯ ಕೊಠಡಿಯ ನಾಲ್ಕು ಕಡೆಗಳಲ್ಲೂ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ಎಲ್ಲಾ ಮೂಲೆಗಳಿಂದಲೂ ಮಳೆ ನೀರು ಸರಾಗವಾಗಿ ಒಳನುಗ್ಗುತ್ತದೆ. ಇಡೀ ಶಾಲೆಯ ಬಹುತೇಕ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇಂಥ ಅವ್ಯವಸ್ಥೆಯಲ್ಲಿ ಮಕ್ಕಳು ಪ್ರತಿನಿತ್ಯ ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಪರಿಸ್ಥಿತಿ ಈ ಮಕ್ಕಳದ್ದಾಗಿದೆ. ಶಾಲೆಯಲ್ಲಿರುವ ಬೇರೆ ಬೇರೆ ತರಗತಿಗಳ ಒಳಹೊಕ್ಕು ನೋಡಿದ್ರೆ, ಇದೇನು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವ ಕೊಠಡಿಯೋ ಅಥವಾ ನಿರುಪಯುಕ್ತ ಸಾಮಾಗ್ರಿಗಳನ್ನು ತುಂಬಿಡುವ ಉಗ್ರಾಣವೋ ಎಂಬ ಸಂದೇಹ ಕಾಡದೆ ಇರದು. ತಗಡಿನ ಶೀಟು, ಮುರಿದ ಆಸನಗಳು ಸೇರಿದಂತೆ ಇತರೆ ಸಾಮಾಗ್ರಿಗಳು ತುಕ್ಕು ಹಿಡಿದಿವೆ. ಈ ಅವ್ಯವಸ್ಥೆಯ ಆಗರದಲ್ಲೇ ಹೆಚ್ಚುವರಿ ವಿದ್ಯಾರ್ಥಿಗಳನ್ನೂ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. 16 ಕೊಠಡಿಗಳಿರುವ ಈ ಶಾಲೆಯಲ್ಲಿ ಒಟ್ಟು 800ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.