ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆ ಮಕ್ಕಳನ್ನು ಶಾಲೆಗೆ ಸೆಳೆಯುವ ಸಲುವಾಗಿ ಲೆಕ್ಕ ಪರಿಶೋಧಕರೊಬ್ಬರು ಒಂದು ವಿಭಿನ್ನ ಅಭಿಯಾನ ಶುರು ಮಾಡಿದ್ದಾರೆ.
ಲೆಕ್ಕಪರಿಶೋಧಕರಾಗಿರುವ ಸಿದ್ದರಾಮೇಶ್ವರಗೌಡ ಎಂಬುವರು ಬಳ್ಳಾರಿ ನಗರದ ಶಾಸ್ತ್ರಿನಗರ ಶಾಲೆಗೆ ಒಂದನೇ ತರಗತಿಗೆ ಸೇರುವ ಮಕ್ಕಳ ಹೆಸರಲ್ಲಿ ಒಂದು ಸಾವಿರ ರೂಪಾಯಿಯನ್ನು ಬ್ಯಾಂಕ್ನಲ್ಲಿ ಠೇವಣಿ ಇಡಲಿದ್ದಾರೆ. ಕಡುಬಡತನದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು, ಸರ್ಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
ಮನೆ ಮನೆಗೂ ತೆರಳಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರದಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಿಗುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಪೋಷಕರಿಗೆ ಮನವಿ ಮಾಡಿದ್ದಾರೆ. ಅವುಗಳೆಲ್ಲದರ ಜತೆಗೆ ತಾನೂ ಒಂದು ಸಾವಿರ ರೂಪಾಯಿ ನೀಡೋದಾಗಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಡತನದಲ್ಲಿ ಹುಟ್ಟಿದ ನಾನು ವಿದ್ಯಾಭ್ಯಾಸ ಪಡೆಯಲು ಪಡಬಾರದ ಕಷ್ಟ ಪಟ್ಟೆ. ನನ್ನ ಕಷ್ಟಗಳು ನಮ್ಮೂರಿನ ಮಕ್ಕಳಿಗೆ ಬರಬಾರದು ಎಂದಿದ್ದಾರೆ. ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ದಾಖಲಾಗಬೇಕು ಅಂತಾ ಈ ವಿನೂತನ ಕಾರ್ಯಕ್ಕೆ ಮುಂದಾಗಿರುವೆ. ಈವರೆಗೆ 16 ಮಕ್ಕಳ ಹೆಸರಲ್ಲಿ ತಲಾ ಒಂದು ಸಾವಿರ ರೂಪಾಯಿಯಂತೆ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ_Online Class: Network ಗಾಗಿ ಗುಡ್ಡದಲ್ಲಿ ಶೆಡ್ ನಿರ್ಮಿಸಿದ ವಿದ್ಯಾರ್ಥಿಗಳು!