ಬಳ್ಳಾರಿ: ಕಳೆದ ನಾಲ್ಕೈದು ತಿಂಗಳಿನಿಂದ ಕೋಲ್ಕತ್ತಾ ಮೂಲದ ಕಲಾವಿದರ ಕುಟುಂಬವೊಂದು ಬಳ್ಳಾರಿಯ ರಾಮೇಶ್ವರಿ ನಗರದ ಬಳಿ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿತ್ತು. ನೂರಾರು ಮೂರ್ತಿಗಳು ಈಗಾಗಲೇ ಸಿದ್ಧಗೊಂಡಿದ್ದವು. ಇನ್ನೇನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆ ಅವಾಂತರಗಳನ್ನು ಸೃಷ್ಟಿ ಮಾಡಿದೆ.
ನೂರಾರು ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿ ಶೆಡ್ನೊಳಗೆ ಇಡಲಾಗಿತ್ತು. ಆದ್ರೆ ಜೋರು ಮಳೆ ಬಂದ ಹಿನ್ನೆಲೆ ಶೆಡ್ನೊಳಗೆ ನೀರು ನುಗ್ಗಿದೆ. ಹಾಗಾಗಿ ನೂರಾರು ಗಣೇಶನ ಮೂರ್ತಿಗಳು ಹಾನಿಯಾಗಿವೆ. ಇದರಿಂದಾಗಿ ಕಲಾವಿದರು ಭಾರಿ ನಷ್ಟ ಎದುರಿಸುವಂತಾಗಿದೆ. ಮಣ್ಣಿನ ಗಣೇಶನ ಮೂರ್ತಿಗಾಗಿ ಸಾರ್ವಜನಿಕರು ಮುಂಗಡ ಹಣ ಸಹ ನೀಡಿದ್ರು. ಈಗ ಮುಂಗಡ ಹಣ ನೀಡಿದವರೆಲ್ಲಾ ಗಣೇಶನ ಮೂರ್ತಿಗಳು ಬೇಕು ಅಂತಾ ಕೇಳುತ್ತಿದ್ದಾರೆ.
ಆದರೆ ಗಣೇಶನ ಮೂರ್ತಿಗಳಿಗೆ ಸಾಕಷ್ಟು ಹಾನಿಯಾಗಿದೆ. ಈಗ ಸರಿಪಡಿಸುವಷ್ಟು ಕಾಲಾವಕಾಶ ಇಲ್ಲ. ಹೀಗಾಗಿ ಕೆಲವರು ಮುಂಗಡ ಹಣ ವಾಪಸ್ ನೀಡುವಂತೆ ಕೇಳುತ್ತಿದ್ದಾರೆ. ಇದು ಕೋಲ್ಕತ್ತಾ ಕಲಾವಿದರಿಗೆ ಭಾರಿ ನಷ್ಟ ಉಂಟು ಮಾಡಿದೆ. ನಾಲ್ಕೈದು ತಿಂಗಳಿನಿಂದ ಹಗಲು-ರಾತ್ರಿ ಕಷ್ಟಪಟ್ಟು ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಆದರೆ ಮಳೆಗೆ ಬಹುತೇಕ ಗಣೇಶನ ಮೂರ್ತಿಗಳಿಗೆ ಹಾನಿಯಾಗಿದ್ದು, ತುಂಬಾ ನಷ್ಟವಾಗಿದೆ ಅಂತಾರೆ ಕಲಾವಿದರು.
ಇದನ್ನೂ ಓದಿ: ತಡರಾತ್ರಿ ಸುರಿದ ಭಾರಿ ಮಳೆಗೆ ಕೆಸರುಗದ್ದೆಯಾದ ತರಕಾರಿ ಮಾರುಕಟ್ಟೆ