ಬಳ್ಳಾರಿ: ನಗರದ ಹೊರವಲಯದಲ್ಲಿ ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್ ಶಿಪ್ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯದ ಪ್ರಗತಿಯನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಭಾನುವಾರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಿರ್ಮಾಣದ ಹೊಣೆಹೊತ್ತಿರುವ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಟೌನ್‌ಶಿಪ್ ನಿರ್ಮಾಣಕ್ಕೆ 300 ಎಕರೆ ಜಮೀನನ್ನು ಖರೀದಿಸಲಾಗಿದ್ದು, ಮೊದಲ ಹಂತದಲ್ಲಿ ಜಿ+2ಮಾದರಿಯ 5616ಮನೆಗಳನ್ನು 96ಎಕರೆ ಪ್ರದೇಶದಲ್ಲಿ 338.25ಕೋಟಿ ರೂ. ವೆಚ್ಚದಲ್ಲಿ ಶೇರ್ ವೆಲ್ ತಂತ್ರಜ್ಞಾನದಡಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
6.02ಲಕ್ಷ ರೂ. ಪ್ರತೀ ಮನೆ ನಿರ್ಮಾಣಕ್ಕೆ ವೆಚ್ಚವಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1.80ಲಕ್ಷ ರೂ.ವನ್ನು ಸರ್ಕಾರ ಸಹಾಯಧನ ನೀಡಲಿದೆ. 1.50ಲಕ್ಷ ರೂ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಭರಿಸಲಾಗುತ್ತದೆ.1.45ಲಕ್ಷ ರೂ.ಬ್ಯಾಂಕ್‌ಲೋನ್ ಸೌಲಭ್ಯ ಕಲ್ಪಿಸಲಾಗಿದೆ ಮತ್ತು ಉಳಿದ 1.27ಲಕ್ಷ ರೂ.ಹಣ ಫಲಾನುಭವಿಗಳು ಭರಿಸಬೇಕಿದ್ದು, ಪಾಲಿಕೆಯಲ್ಲಿ ಎಸ್ಸಿ/ಎಸ್ಟಿಗಾಗಿ ಮೀಸಲಿದ್ದ ಶೇ.25ರಷ್ಟು ಅನುದಾನದಲ್ಲಿ ಸ್ವಲ್ಪ ಹಣ ಭರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ವಿವರಿಸಿದ ಅವರು ಇತರೆ ವರ್ಗದ ಫಲಾನುಭವಿಗಳು 1.87ಲಕ್ಷ ರೂ. ಭರಿಸಬೇಕು ಎಂದರು.
ಈ ಟೌನ್ ಶಿಪ್ ನಲ್ಲಿ 68 ಎಕರೆ ಪ್ರದೇಶದಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳು, ರಸ್ತೆ, ಯುಜಿಡಿ, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳು, ಆಸ್ಪತ್ರೆ, ಉದ್ಯಾನವನ ಸೇರಿದಂತೆ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅಲ್ಲಿಪುರ ಕೆರೆಯಿಂದ ನೀರಿನ ಸೌಕರ್ಯ ಈ ಟೌನ್ ಶಿಪ್ಗೆ ಕಲ್ಪಿಸಲಾಗುವುದು ಎಂದರು. ರಸ್ತೆ, ಯುಜಿಡಿ, ವಿದ್ಯುತ್ ಸ್ಟೇಶನ್, ನೀರು ಸರಬರಾಜಿಗೆ ಜಿಲ್ಲಾ ಖನಿಜ ನಿಧಿಯಡಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.