ಬಳ್ಳಾರಿ: ಬಿಜೆಪಿ ಮುಖಂಡ ರಾಮಲಿಂಗಪ್ಪ ದೊಡ್ಡವರು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ಕೊಡುವುದಿಲ್ಲ. ಆದರೆ, ಸ್ಪರ್ಧೆಯಲ್ಲಿ ಸೋಲು - ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗುರುವಾರ ನಡೆದ ಕ್ರಿಕೆಟ್ ಮ್ಯಾಚ್ನಲ್ಲಿ ಭಾರತ ಸೋತಿತು. ಹಾಗಂತ ತಂಡ ಬಿಡಲಾದೀತೆ? ಎಂದು ಶಾಸಕ ಸೋಮಶೇಖರ್ ರೆಡ್ಡಿ ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿನ ಕಾಲ್ಸೆಂಟರ್ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ನ.20 ರಂದು ಬಳ್ಳಾರಿಯಲ್ಲಿ ಆಯೋಜಿಸಿರುವ ರಾಜ್ಯ ಬಿಜೆಪಿ ಎಸ್‌ಟಿ ವಿರಾಟ್ ಸಮಾವೇಶದ ಕುರಿತು ಮಾಹಿತಿ ನೀಡಿದರು.
ಶಾಸಕ ರೆಡ್ಡಿ ಅವರಿಗೆ ಟಿಕೆಟ್ ನೀಡಿದ್ರೆ ಬಿಜೆಪಿ ಗೆಲುವು ಕಷ್ಟ ಎಂದಿದ್ದ ಬಿಜೆಪಿ ಮುಖಂಡ ರಾಮಲಿಂಗಪ್ಪ ರೆಡ್ಡಿ ಸೋದರರ ವಿರುದ್ಧ ವಾಗ್ದಾಳಿ ನಡೆಸಿದ ಸೋಮಶೇಖರ್, ಸೋಲು- ಗೆಲುವನ್ನು ಜನರು ನಿರ್ಧರಿಸುತ್ತಾರೆ. ಒಬ್ಬರು ಅಸಮಾಧಾನ ಹೊರಹಾಕಿದ ಮಾತ್ರಕ್ಕೆ ಇಡೀ ಪಕ್ಷದ ಕಾರ್ಯಕರ್ತರ ಅಸಮಾಧಾನ ಎನ್ನಲಾಗದು ಎಂದರು.
ಇದನ್ನೂ ಓದಿ: ಸೋಮಶೇಖರ್ ರೆಡ್ಡಿ ವಿವಾದಿತ ಹೇಳಿಕೆಗೆ ಬಿಜೆಪಿ ಶಾಸಕ ದಡೇಸಗೂರು ಸಮರ್ಥನೆ..
ಎಸ್‌ಟಿ ವಿರಾಟ್ ಸಮಾವೇಶದ ಕುರಿತು ಮಾತನಾಡಿ, ನಮ್ಮಲ್ಲಿ ಈಗಾಗಲೇ ಲಭ್ಯವಿರುವ ಫೋನ್ ನಂಬರ್‌ಗಳ ಪಟ್ಟಿಯನ್ನು ಆಧರಿಸಿ ಪಕ್ಷದ ಕಾರ್ಯಕರ್ತರು, ಮುಖಂಡರು, ಎಲ್ಲರಿಗೂ ಎಸ್‌ಟಿ ವಿರಾಟ್ ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡುವ ಕಾರ್ಯ ಇಂದಿನಿಂದ ಪ್ರಾರಂಭವಾಗಲಿದೆ. ಸಮುದಾಯದ, ಪಕ್ಷದ ಕಟ್ಟ ಕಡೆಯ ಸಾಮಾನ್ಯ ಕಾರ್ಯಕರ್ತನಿಗೂ ಕೂಡ ಈ ಕಾಲ್‌ಸೆಂಟರ್‌ನಿಂದ ಕರೆ ಮಾಡಿ ಸಮಾವೇಶಕ್ಕೆ ಆಹ್ವಾನ ನೀಡಲಾಗುವುದು. ಅಂದಾಜು 50 ಜನರು ಕಾಲ್‌ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲೆಯ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಜನರಿಗೆ ವಿಶೇಷವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಕೇಸರಿ ಬ್ರಿಗೇಡ್ ಬೃಹತ್ ಒಬಿಸಿ ಸಮಾವೇಶ.. ಚುನಾವಣೆಗೆ ರಹಕಣಳೆ
ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಆಹ್ವಾನಿಸಿದ್ದೇವೆ, ಮೂವರಲ್ಲಿ ಒಬ್ಬರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ ಸೋಮಶೇಖರ್ ರೆಡ್ಡಿ, ಸಮಾವೇಶದ ಸಿದ್ಧತೆಗಳು ಭರದಿಂದ ಸಾಗಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂದೇಶದ ಮೇರೆಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸಮಾವೇಶ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಗುರುಲಿಂಗನಗೌಡ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಗುಣ, ವೀರಶೇಖರರೆಡ್ಡಿ, ರಾಜೀವ್ ತೊಗರಿ, ಗಾಳಿ ಶಂಕ್ರಪ್ಪ, ಬಿ.ರಾಮಕೃಷ್ಣ, ಸುನೀಲ್ ಪ್ರಹ್ಲಾದ್, ಜ್ಯೋತಿ ಪ್ರಕಾಶ್, ಪ್ರಕಾಶ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.