ಬಳ್ಳಾರಿ: ನೌಕರರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆಯು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬಳ್ಳಾರಿ ಜಿಲ್ಲಾಡಳಿತದ ಜೊತೆ ಜಿಂದಾಲ್ ಫೌಂಡೇಶನ್ ಕೈ ಜೋಡಿಸಿದ್ದು, ತೋರಣಗಲ್ಲುನಲ್ಲಿರುವ ಸಂಜೀವನಿ ಮಲ್ಟಿ - ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ.
ಜೆಎಸ್‌ಡಬ್ಲ್ಯೂ 'ವಿ ಕೇರ್' ಕಾರ್ಯಕ್ರಮದ ಅಡಿ ತನ್ನ ನೌಕರರಿಗೆ ಸಂಸ್ಥೆ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ಸಹ ಪ್ರಾರಂಭಿಸಿದೆ. ನೌಕರರು ಮತ್ತು ಅವರ ಕುಟುಂಬ ಸದ್ಯಸರು ಸೇರಿದಂತೆ ಸಂಸ್ಥೆಯ ಗುತ್ತಿಗೆದಾರರು, ಕೌಶಲ್ಯ ರಹಿತ ಸಿಬ್ಬಂದಿ ಹಾಗೂ ಟೌನ್‌ಶಿಪ್ ನಿವಾಸಿಗಳಿಗೆ ಸಂಸ್ಥೆ ಜಾಗೃತಿ ಸಭೆಗಳನ್ನು ನಡೆಸಿ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದೆ.
ಶೇಕಡ 50ರಷ್ಟು ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಒದಗಿಸಲಾಗಿದ್ದು, ಅಗತ್ಯವಾದ ಮೀಟಿಂಗ್ ಕೂಡ ಜೂಮ್ ಅಥವಾ ಎಂಎಸ್ ಟೀಮ್ ಅಪ್ಲಿಕೇಶನ್ ಬಳಸಿ ನಡೆಸಲಾಗುತ್ತಿದೆ. ಪರಿಣಾಮ ಎಲ್ಲರೂ ಒಂದೆಡೆ ಸೇರುವುದಕ್ಕೆ ಕಡಿವಾಣ ಹಾಕಲಾಗಿದೆ.
ಕಚೇರಿ, ಮಳಿಗೆಗಳು, ವಾಹನಗಳು ಹಾಗು ಎಟಿಎಂ ಸೇರಿದಂತೆ ಸಂಸ್ಥೆಯ ಎಲ್ಲ ಪ್ರದೇಶವನ್ನು ಆಗಾಗ್ಗೆ ಸ್ಯಾನಿಟೈಸೇಷನ್ ಕೂಡ ಮಾಡಲಾಗುತ್ತಿದೆ. ಗೇಟ್ ಬಳಿಯೇ ಟೆಂಪರೇಚರ್ ಕೂಡ ಚೆಕ್ ಮಾಡಲಾಗುತ್ತಿದ್ದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸೇತು ಆ್ಯಪ್ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಆಸ್ಪತ್ರೆಯು 82 ಹಾಸಿಗೆ ಹೊಂದಿದ್ದು ಇದರಲ್ಲಿ 7 ಐಸಿಯು ಹಾಸಿಗೆ ಇದೆ. ಜೈವಿಕ ವೈದ್ಯಕೀಯ ಉಪಕರಣಗಳಾದ ವೆಂಟಿಲೇಟರ್‌ಗಳು, ಪೇಸ್‌ಮೇಕರ್‌ಗಳು, ಡಯಾಲಿಸಿಸ್ ಯಂತ್ರ ಮತ್ತು ರೋಗಿಗಳ ಮೇಲ್ವಿಚಾರಣಾ ಸಾಧನಗಳು ಸೇರಿದಂತೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಆಸ್ಪತ್ರೆ ಹೊಂದಿದೆ.
ಜೆಎಸ್‌ಡಬ್ಲ್ಯೂ ಮತ್ತು ಬಳ್ಳಾರಿ ಜಿಲ್ಲಾಡಳಿತದ ಒಪ್ಪಂದದ ಪ್ರಕಾರ ಜಿಂದಾಲ್ ಸಂಜೀವಿನಿ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಲ್ಲಿಯ ವೈದ್ಯರು, ತಜ್ಞರು, ದಾದಿಯರು ಮತ್ತು ಅರೆ - ವೈದ್ಯಕೀಯ ತಂಡವೇ ಸಂಪೂರ್ಣವಾಗಿ ನಿರ್ವಹಿಸುತ್ತಾರೆ. ರೋಗಿಗಳ ಒಟ್ಟಾರೆ ವೆಚ್ಚವನ್ನು ಆಸ್ಪತ್ರೆಯು ಭರಿಸಲಿದೆ. ಬಳ್ಳಾರಿ ಜಿಲ್ಲಾಡಳಿತವು ಆಸ್ಪತ್ರೆಯ ಮೇಲ್ವಿಚಾರಣೆ ಮಾತ್ರ ನೋಡಿಕೊಳ್ಳುತ್ತದೆ.
ಕೊವೀಡ್ - 19 ರೋಗಿಯ ಚಿಕಿತ್ಸೆಗಾಗಿ ಜಿಲ್ಲಾಡಳಿತ ಹೊರಡಿಸಿದ ಮಾರ್ಗಸೂಚಿಗಳನ್ನು ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅನುಸರಿಸುತ್ತಿದ್ದು, ಸರ್ಕಾರಿ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಒಪಿ ಜಿಂದಾಲ್ ವೃತ್ತಿಪರ ತರಬೇತಿ ಕೇಂದ್ರವನ್ನು ಸಹ ಕೊರೊನಾ ರೋಗ ಲಕ್ಷಣ ಇರುವ ರೋಗಿಗಳ ಚಿಕಿತ್ಸೆಗೆ ನೀಡುವುದಾಗಿ ಜೆಎಸ್‌ಡಬ್ಲ್ಯೂ ಫೌಂಡೇಶನ್ ಈಗಾಗಲೇ ಜಿಲ್ಲಾಡಳಿತಕ್ಕೆ ತಿಳಿಸಿದೆ. ಇದರಿಂದ ಹೆಚ್ಚುವರಿ ರೋಗಿಗಳನ್ನು ಇಲ್ಲಿ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ. ಈ ಕೇಂದ್ರವನ್ನು ಈಗಾಗಲೇ ಕೊವೀಡ್-19 ಶಂಕಿತ ಪ್ರಕರಣಗಳ ಪ್ರತ್ಯೇಕ ಕೇಂದ್ರ (ಐಸೋಲೇಷನ್ ಸೆಂಟರ್) ಆಗಿ ಮಾರ್ಪಾಡು ಮಾಡಲಾಗಿದೆ. ಜಿಲ್ಲಾಡಳಿತದಿಂದ ಅನೂಮೋದನೆಗಾಗಿ ಕಾಯಲಾಗುತ್ತಿದ್ದು, ಅನುಮೋದನೆ ದೊರತ ನಂತರ ಇದನ್ನು ಕೊವೀಡ್-19 ಚಿಕಿತ್ಸೆ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು.
ಜೆಎಸ್‌ಡಬ್ಲ್ಯೂ ಫೌಂಡೇಶನ್ ವತಿಯಿಂದ ಸುತ್ತಮುತ್ತದ 21 ಗ್ರಾಮಗಳಿಗೆ ಸ್ಯಾನಿಟೈಸರ್, 23,000 ಸರ್ಜಿಕಲ್ ಮಾಸ್ಕ್, 52,000 ಹೊಲಿಗೆ ಯಂತ್ರದಿಂದ ತಯಾರಿಸಿದ ಬಟ್ಟೆಯ ಮಾಸ್ಕ್ ಉಚಿತವಾಗಿ ವಿತರಿಸಲಾಗಿದೆ. ಜತೆಗೆ ಫೌಂಡೇಶನ್‌ನ ಸಿಬ್ಬಂದಿ ಸಂಸ್ಥೆಯ ಸುತ್ತಮುತ್ತಲಿನ ಸುಮಾರು 5,100 ಮನೆಗಳಿಗೆ ಭೇಟಿ ನೀಡಿ 22,000 ಜನರಿಗೆ ಬೇಸಿಕ್ ಕೋವಿಡ್-19 ಪರೀಕ್ಷೆ ಕೂಡ ನಡೆಸಿದ್ದಾರೆ. ಸಂಸ್ಥೆ ಸುತ್ತಮುತ್ತ ಇರುವ 12 ಗ್ರಾಮಗಳಲ್ಲಿ 7,100 ಮನೆಗಳ ಸುಮಾರು 38,000 ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಸಭೆಗಳನ್ನು ಸಹ ಹಮ್ಮಿಕೊಂಡು ಮಾಹಿತಿ ಒದಗಿಸಿದೆ.
ಅಷ್ಟೇ ಅಲ್ಲದೆ ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆಯು ಮುಂಬರುದ ದಿನಗಳಲ್ಲಿ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.