ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಬಸವಣ್ಣ ಕ್ಯಾಂಪಿನ ರೈತರಿಂದ ಕಳೆದ ವರ್ಷ ಭತ್ತ ಖರೀದಿ ಮಾಡಿದ ಮಧ್ಯವರ್ತಿಗಳು ಇದುವರೆಗೂ ಹಣದ ನೀಡಿಲ್ಲ. ಆದರೆ, ಈ ವಿಷಯದಲ್ಲಿ ಅಧಿಕಾರಿಗಳು ಮಾತ್ರ ಜಾಣ ಮೌನವಹಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ತಮ್ಮಲ್ಲಿಗೆ ಬಂದ ಇಬ್ಬರು ಮಧ್ಯವರ್ತಿಗಳಾದ ಬೀರಪ್ಪ ಮತ್ತು ಸತ್ಯರೆಡ್ಡಿ ಎಂಬುವರು ತಾವು ಸ್ಥಳದಲ್ಲೇ ಭತ್ತ ಖರೀದಿ ಮಾಡುವುದಾಗಿ ತಿಳಿಸಿ ಮೊದ-ಮೊದಲು ಅದೇ ರೀತಿ ವ್ಯವಹಾರ ಮಾಡಿ ಹಣ ಪಾವತಿ ಮಾಡಿದ್ದಾರೆ.
ಇದನ್ನು ನಂಬಿದ ಕೆಲ ರೈತರು ತಮ್ಮ ಬೆಳೆ ಕಟಾವಿಗೆ ಬಂದ ಮೇಲೆ ಇದೇ ಮಧ್ಯವರ್ತಿಗಳಿಗೆ ಭತ್ತ ನೀಡಿದ್ದಾರೆ. ಆದರೆ, ಅವರು ತಿಂಗಳು ಕಳೆದರೂ ಹಣ ನೀಡಿಲ್ಲ. ಇದಕ್ಕೆ ಅನೇಕ ಸಬೂಬುಗಳನ್ನು ಹೇಳುತ್ತಾ, ನಂತರದಲ್ಲಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಸಾಲ ಮಾಡಿ ಬೀಜ ತಂದು ಸಸಿ ನೆಡಲು ಸಿದ್ದ ಮಾಡಿಕೊಂಡಿದ್ದೆವು. ಕಾಲ ಕಾಲಕ್ಕೆ ನೀರು, ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ, ಸ್ವಂತ ಮಕ್ಕಳಂತೆ ಬೆಳಿಸಿದ ಬೆಳೆ ಮಾರಾಟ ಮಾಡಿದರೂ ಪಟ್ಟ ಶ್ರಮ ವ್ಯರ್ಥವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಿದೆ ಎಂದಿದ್ದಾರೆ.
ಈ ಸಮಯದಲ್ಲಿ ದೂರು ನೀಡಲು ಹೋದಾಗ ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಪಡೆಯುವುದನ್ನು ಬಿಟ್ಟು ಉಲ್ಟಾ ಅವರುಗಳ ಮೇಲೆಯೇ ಗದರುತ್ತಾ ನಿಮ್ಮ ಬಳಿ ಇರುವ ಸೋಡಾ ಚೀಟಿಗಳಿಂದ ನಮಗೇನೂ ಮಾಡೋಕಾಗಲ್ಲ. ನಾವು ಪತ್ತೆ ಮಾಡಿ ತಂದರೂ ನೀವು ಅವರನ್ನು ಏನೂ ಮಾಡೋಕಾಗಲ್ಲ ಎಂದು ಧಮ್ಕಿ ಹಾಕಿದ್ದಾರೆ.
ಓದಿ: ಉಪ್ಪಾರ ಸಮುದಾಯದ ಬೇಡಿಕೆ ಈಡೇರಿಸಲು ಬದ್ದ : ಸಚಿವ ಕೆ.ಎಸ್. ಈಶ್ವರಪ್ಪ
ನಮಗೆ ಅನ್ಯಾಯವಾಗಿದೆ, ಮೋಸ ಮಾಡಿದವರು ಕಣ್ಮುಂದೆ ಇದ್ದರೂ ಅವರಿಂದ ನಮಗೆ ನ್ಯಾಯ ಒದಗಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ನಾವು ವಿಷ ಕುಡಿಯಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲಿನ ಪೊಲೀಸ್ ಅಧಿಕಾರಿಗಳು ನಮಗೆ ನ್ಯಾಯ ದೊರಕಿಸಿ ಕೊಡಬೇಕಿದೆ ಎಂದು ಅನ್ನದಾತರು ತಮ್ಮ ಅಳಲು ತೋಡಿಕೊಂಡಿದ್ದಾರೆ.