ಬಳ್ಳಾರಿ: ಇಂಡಿಯನ್ ಆರ್ಮಿ ಹೆಸರಿನಡಿ ಅನಾಮಧೇಯ ವ್ಯಕ್ತಿಯೊಬ್ಬ ನಗರದ ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ಸಂಖ್ಯೆಗೆ ಕರೆಮಾಡಿ ಆನ್ಲೈನ್ನಲ್ಲಿ ನಗದು ಹಣ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
![Fraud by cybercrime thieves](https://etvbharatimages.akamaized.net/etvbharat/prod-images/kn-bly-2-cyber-crime-vsl-7203310_29052020152756_2905f_01695_27.jpg)
ಹೌದು, ಮಾಸ್ಕ್ - ಸ್ಯಾನಿಟೈಸರ್ ಖರೀದಿಸುವ ಬೇಡಿಕೆಯೊಂದನ್ನಿಟ್ಟುಕೊಂಡು ಅನಾಮಧೇಯ ವ್ಯಕ್ತಿಯು ಇಲ್ಲಿನ ಕಪ್ಪಗಲ್ಲು ರಸ್ತೆಯಲ್ಲಿರುವ ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ಸಂಖ್ಯೆಗೆ ಕರೆಮಾಡಿ, ಹಿಂದಿ ಭಾಷೆಯಲ್ಲಿ ಮಾತನಾಡಿ, ನಾವ್ ಇಂಡಿಯನ್ ಆರ್ಮಿ ಕಡೆಯವರು, ನಮಗೊಂದಿಷ್ಟು ಸ್ಯಾನಿಟೈಸರ್ - ಮಾಸ್ಕ್ಗಳ ಅಗತ್ಯತೆ ಇದೆ ಎಂದಿದ್ದಾರೆ.
ಅನಾಮಧೇಯ ವ್ಯಕ್ತಿಯು ಮುಂದುವರೆದು, ನೀವು ನಮ್ಮ ಇಂಡಿಯನ್ ಆರ್ಮಿಯ ಬ್ಯಾಂಕ್ ಖಾತೆಗೆ 10,000 ರೂ. ಮೊದ್ಲು ಹಾಕಿ, ಆ ಮೇಲೆ ನಾವು ನಿಮಗೆ ನೀವು ಹಾಕಿದ 10,000 ರೂ. ಸೇರಿದಂತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಯ ಹಣದ ಮೊತ್ತವನ್ನೂ ಸೇರಿಸಿ ಮರಳಿ ನಿಮ್ಮ ಖಾತೆಗೆ ಜಮೆ ಮಾಡೋದಾಗಿ ತಿಳಿಸಿದ್ದಾರೆ. ಆತನ ಮಾತಿಗೆ ಮರುಳಾಗಿ, ಮೆಡಿಕಲ್ ಶಾಪ್ ಮಾಲೀಕ ಮೊದಲು 10 ರೂ. ಹಾಕಿದ್ದಾರೆ.
ಅದಕ್ಕೆ ಒಪ್ಪದ ಆ ವ್ಯಕ್ತಿ 10,000 ರೂ. ಹಾಕುವಂತೆ ದುಂಬಾಲು ಬಿದ್ದಿದ್ದಾನೆ. ಮೆಡಿಕಲ್ ಶಾಪ್ ಮಾಲೀಕನು ನಾವ್ಯಾಕೆ ನಿಮಗೆ ಹಣ ಹಾಕಬೇಕು ಎಂದು ಪ್ರಶ್ನಿಸಿದಾಗ, ಏನ್ರೀ ಇಂಡಿಯನ್ ಆರ್ಮಿ ಮೇಲೆ ನಂಬಿಕೆ ಇಲ್ವಾ ಎಂದಾಗ, ಮನ ಕರಗಿಸಿಕೊಂಡ ಮೆಡಿಕಲ್ ಶಾಪ್ ಮಾಲೀಕ ಕೇವಲ 5,000 ರೂ.ಗಳನ್ನ ಆನ್ಲೈನ್ ಮೂಲಕ ಅನಾಮಧೇಯ ವ್ಯಕ್ತಿಯ ಖಾತೆಗೆ ಜಮೆ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಆ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮೆಡಿಕಲ್ ಶಾಪ್ ಮಾಲೀಕ ಶರಣಬಸವ, ಇಂಡಿಯನ್ ಆರ್ಮಿ ಹೆಸರಿನಡಿ ಅನಿಲ್ ಕುಮಾರ ಎಂಬಾತನು ಕರೆಮಾಡಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅಗತ್ಯತೆಯ ಕುರಿತು ಬೇಡಿಕೆ ಇಟ್ಟಿರುವ ಬಗ್ಗೆ ಹಾಗೂ ಆತ ನಡೆಸಿದ ಸಂಭಾಷಣೆಯ ವಿವರವನ್ನು ನೀಡಿದ್ದಾರೆ.