ಬಳ್ಳಾರಿ: ಜಿಲ್ಲೆಯಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆ ಪೊಲೀಸರು ವಿವಿಧೆಡೆ ದಾಳಿ ಮಾಡಿ ಅಂದಾಜು 10,10,568 ರೂ. ಮೌಲ್ಯದ 388.68 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
ಅ.9ರಂದು ಜಿಲ್ಲೆಯ ಕುರುಗೋಡು ತಾಲೂಕಿನ ಮದುರೆ ಗ್ರಾಮದ ಚಟ್ಟಿ ಹನುಮಂತಪ್ಪ ಅವರ ಗುಡಿಸಲು ಮನೆಯಲ್ಲಿ ಅನಧಿಕೃತವಾಗಿ ಅಕ್ಕಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಹಾಗೂ ಅಧಿಕಾರಿಗಳ ತಂಡ ದಾಳಿ ಮಾಡಿ 35.10 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯ ಸಿರುಗುಪ್ಪದಲ್ಲಿ ಅನಧಿಕೃತವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, 317.80 ಕ್ವಿಂಟಾಲ್ ಅಕ್ಕಿ ಹಾಗೂ 7ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ರಾಜಶೇಖರ್, ಅಕ್ಕಿ ಗಿರಣಿ ಮಾಲೀಕರ ಇಬ್ರಾಹಿಂಸಾಬ್, ಲಾರಿ ಮಾಲೀಕ ಎಂ.ಪಿ. ಪ್ರಸನ್ನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಬಳ್ಳಾರಿಯ ಎ.ಪಿ.ಎಂ.ಸಿ ಹತ್ತಿರ ಇರುವ ಈದ್ಗಾ ಮೈದಾನದ ಬೈಪಾಸ್‍ನಿಂದ ಬೆಂಗಳೂರು ರಸ್ತೆಯಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿ, 27.50 ಕ್ವಿಂಟಾಲ್ ಅಕ್ಕಿ ಹಾಗೂ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಇರ್ಫಾನ್, ದಾದಾಪೀರ್, ಶರಬಯ್ಯ, ಇಲಿಯಾಸ್ ಹಾಗೂ ತುಮಕೂರಿನ ಜಾವೇದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅ.11 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಿರಿಸಿನಕಲ್ಲು ಪ್ರದೇಶದ ಕಾಲುವೆ ಬಳಿ ಅನಧಿಕೃತವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದಾಗ ದಾಳಿ ಮಾಡಿ 8.28 ಕ್ವಿಂಟಾಲ್ ಅಕ್ಕಿ ಜೊತೆಗೆ ಒಂದು ವಾಹನ ವಶಪಡಿಸಿಕೊಂಡಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಖಾಸಿಂ ವಿರುದ್ಧ ಪ್ರಕರಣ ದಾಖಲಾಗಿದೆ.